ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಏನಪಾ ಅಂದ್ರೆ...

Last Updated 20 ಅಕ್ಟೋಬರ್ 2019, 18:40 IST
ಅಕ್ಷರ ಗಾತ್ರ

‘ನಿಮ್ಮ ಮಂದಿಗೆ ತೆಲಿ ತುಸು ಕಡಿಮಿ ಅಂತ ಬೆಂಗಳೂರು ಕಡೆಯವ್ರು ಮೊದಲೇ ನಗ್ತಾರ. ಅಂತಾದ್ರಾಗೆ ಇವ್ರು ಹುಡುಗ್ರ ತೆಲಿ ಮ್ಯಾಗ ಡಬ್ಬಾ ಹಾಕಿಸಿ ಪೇಪರು ಬರಸ್ಯಾರ. ಕಾಪಿ ತಡೆಯಾಕ ಬ್ಯಾರೆ ಉಪಾಯ ಹೊಳಿಲಿಲ್ಲೇನ್ಇವ್ರಿಗಿ. ಏನೋ ಹೊಸ ಪ್ರಯೋಗ ಮಾಡಿದ್ರೆ ಕಾಲೇಜೇ ಬಂದ್ ಮಾಡಿದ್ರು. ದಿಲ್ಲೀಲಿ ಕುಂತವ್ರು ಎಲ್ಲರ ತಲೆಗೂ ದೊಡ್ಡ ಟೋಪಿ ಮಡಗಿ ಐದು ವರ್ಸದ ಮ್ಯಾಲಾತು. ಮ್ಯಾಗಿದ್ದೋರು ಟೋಪಿ ಹಾಕಿದ್ರ ಅಡ್ಡಿಲ್ಲೇನು...’ ಹಾವೇರಿಯ ರಂಗ, ಸಹೋದ್ಯೋಗಿ ಬಳಿ ಅಲವತ್ತುಕೊಂಡ.

‘ಇವ್ರು ಐದು ವರ್ಷದಿಂದ ಟೋಪಿ ಹಾಕಿದ್ದನ್ನೇ ದೊಡ್ಡದಾಗಿ ಹೇಳ್ತೀಯಲ್ಲ... ಅವ್ರು ಅರವತ್ ವರ್ಷದಿಂದ ಟೋಪಿ ಹಾಕಿರಲಿಲ್ಲವಾ’ ಭಕ್ತ ಸಹೋದ್ಯೋಗಿ ಗುರ‍್ರೆಂದ.

‘ಅವ್ರು ಟೋಪಿ ಹಾಕಿದ್ರೂ ಹಿಂಗ ಎಡಕ್ಕೆ, ಹಿಂದೆ, ಮುಂದೆ ಹೊಳ್ಳಿ ನೋಡಲಾರದಂಗೆ ಮಾಡಿರ್ಲಿಲ್ಲ. ಈಗ ಹಾಕಿರೋ ಟೋಪಿಯಲ್ಲಿ ಬರೀ ಬಲಕ್ಕೆ ಮಾತ್ರ ತಿರುಗಬೌದು...’ ರಂಗನಿಗೆ ಮಾತುಮುಗಿಸಲೂ ಬಿಡದೆ ಸಹೋದ್ಯೋಗಿ ಹೇಳಿದ ‘ಟೋಪಿ ಹಾಕಿಸಿಕೊಂಡೇ ಜನ ಮುನ್ನಡೀತಿದಾರಲ್ಲ. ಗ್ಲೋಬಲ್ ಲೆವೆಲ್ ಹೆಂಗೆ ಮೆಂಟೇನ್ ಮಾಡಿಲ್ಲವಾ’

‘ಎಲ್ಲಿ ಮುನ್ನಡಿತಿದಾರೆ... ಕಿಸೆ ಖಾಲಿಯಾಗಿ ಕುಸಿದು ಕೂತಾರೆ. ಹಸಿವಿನ ಸೂಚ್ಯಂಕದಲ್ಲಿ ಅಕ್ಕಪಕ್ಕದ ದೇಶಗಳೂ ನಮಗಿಂತ ಭಾಳ ಮ್ಯಾಲ ಹೋಗ್ಯಾರ, ನಾವು ಅದ್ರಾಗೂ ಕೆಳಗೆ’ ರಂಗನೂ ವಾದಿಸಿದ.

‘ಮೊನ್ನೆ ತೀರಿಕೊಂಡ ಒಬ್ಬ ಭಿಕ್ಷುಕನ ಬ್ಯಾಂಕ್ ಖಾತೇಲಿ ಎಂಟು ಲಕ್ಷ ಇತ್ತಂತೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಎಷ್ಟ್ ಭಾರತೀಯರು ಇದಾರೆ... ಇಷ್ಟ್ ಶ್ರೀಮಂತ ಭಿಕ್ಷುಕರು, ಕೋಟ್ಯಧಿಪತಿ ಉದ್ಯಮಿಗಳು ಇರೋ ನಮ್ಮ ದೇಶದಲ್ಲಿ ಹಸಿದವ್ರು ಎಲ್ಲಿದಾರೆ? ನಿಮ್ಮ ಅರ್ಥಶಾಸ್ತ್ರದ ನೊಬೆಲ್ ವಿಜೇತರು ಹೇಳೋದು, ಈ ಸೂಚ್ಯಂಕ ಎಲ್ಲಾ ಬರೀ ಸುಳ್ಳು...’

‘ಹಂಗಾರೆ ಸತ್ಯ ಏನಪಾ...’

‘ಈ ಸಲ ದೀಪಾವಳಿ ಬೋನಸ್ ಇಲ್ಲ. ನವೆಂಬರಿನಿಂದ ಅರ್ಧ ತಿಂಗಳು ಕೆಲಸ,
ಅರ್ಧ ಸಂಬಳ’ ಬಾಗಿಲಲ್ಲಿ ನಿಂತ ಬಾಸ್ ಸತ್ಯ ಘೋಷಿಸಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT