ಸೋಮವಾರ, ಅಕ್ಟೋಬರ್ 18, 2021
25 °C

ಟ್ವಿಟರ್ ಟೂರ್ನಿ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ಕೊರೊನಾಗೆ ಹೆದರಿ ಐಪಿಎಲ್ ಟೂರ್ನಿ ವಿದೇಶಿ ಪಾಲಾಗಿದೆ. ಆದರೆ, ದೇಶೀಯ ರಾಜಕೀಯ ತಂಡಗಳು ಟ್ವಿಟರ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್, ಬೌಲಿಂಗ್ ನಡೆಸಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿವೆ.

‘ಜೆಡಿಎಸ್‍ನವರು ಅಧಿಕಾರಕ್ಕೆ ಬರುವ ಗಿರಾಕಿಗಳಲ್ಲ, 30 ಸೀಟ್‍ನಲ್ಲೇ ಸಿಕ್ಕಸಿಕ್ಕವರ ಜೊತೆ ಹೋಗುವರು...’ ಎಂದು ಕಾಂಗ್ರೆಸ್ ತಂಡದ ಸಿದ್ದರಾಮಣ್ಣ ಗೂಗ್ಲಿ ಎಸೆದರು.

ಬಾಲನ್ನು ಬಡಿದು ಬೌಂಡರಿಗಟ್ಟಿದ ಜೆಡಿಎಸ್ ತಂಡದ ನಾಯಕ ಕುಮಾರಣ್ಣ, ‘ಜೆಡಿಎಸ್‍ನ ಅನ್ನ, ಗೊಬ್ಬರದಿಂದ ಬೆಳೆದ ಸಿದ್ದರಾಮಣ್ಣ ಯಾರೋ ಕಟ್ಟಿದ ಹುತ್ತ ಹೊಕ್ಕು ಮರುಹುಟ್ಟು ಪಡೆಯುವ ಪರಾವಲಂಬಿ ಸಸ್ಯ...’ ಎಂದು ಅವರ ಸಿದ್ಧಕಲೆಗೆ ತಿರುಗೇಟು ನೀಡಿದರು.

ಟ್ವಿಟರ್ ಟೂರ್ನಿಯ ಅನುಭವಿ ಆಟಗಾರ, ಬಿಜೆಪಿ ತಂಡದ ನಾಯಕ ಬಸಣ್ಣ ಎದುರಾಳಿ ಬೌಲರ್‌ಗಳ ವೈಡ್ ಬಾಲ್‍ಗಳನ್ನು ಕಡೆಗಣಿಸಿ, ಅಪಾಯಕಾರಿ ಎಸೆತಗಳನ್ನು ರಕ್ಷಣಾತ್ಮಕವಾಗಿ ಎದುರಿಸುತ್ತಾರೆ. ನಡುನಡುವೆ ಲೂಸ್ ಬಾಲ್‍ಗಳನ್ನು ಬೌಂಡರಿಗಟ್ಟಿ ತಂಡದ ಸ್ಕೋರ್ ಹೆಚ್ಚಿಸುವ ಕಲಾತ್ಮಕ ಆಟ ಆಡುತ್ತಿದ್ದಾರೆ.

ಕಾಂಗ್ರೆಸ್ ತಂಡದ ನಾಯಕ ಡಿಕೆಶಿಯಣ್ಣ, ದೌರ್ಬಲ್ಯವಿರುವ ಪ್ರತಿಸ್ಪರ್ಧಿ ಆಟಗಾರರನ್ನು ಗುರುತಿಸಿ ಕ್ಯಾಚ್ ಹಿಡಿದು, ಎದುರಾಳಿ ತಂಡವನ್ನು ದುರ್ಬಲಗೊಳಿಸಿ ಪಂದ್ಯ ಗೆಲ್ಲುವ ಗೇಮ್‍ಪ್ಲಾನ್ ಮಾಡುತ್ತಿದ್ದಾರೆ.

ಈ ಬಾರಿ ಕಪ್ ಗೆಲ್ಲಲೇಬೇಕು ಎಂದುತಮ್ಮ ತಂಡದ ಆಟಗಾರರನ್ನು ಕುಮಾರಣ್ಣ ಹುರಿದುಂಬಿಸಿದ್ದಾರೆ. ಆಟಗಾರರಿಗೆ ಹೆಚ್ಚಿನ ತರಬೇತಿ ನೀಡಲು ಕುಮಾರಣ್ಣ ತಮ್ಮ ಹೋಂ ಪಿಚ್‍ನಲ್ಲಿ ನೆಟ್ ಪ‍್ರ್ಯಾಕ್ಟೀಸ್ ವ್ಯವಸ್ಥೆ ಮಾಡಿ ಆಟಗಾರರ ಫಿಟ್‍ನೆಸ್, ಸಾಮರ್ಥ್ಯ ಹೆಚ್ಚಿಸುವುದ ರೊಂದಿಗೆ ಸಮರ್ಥ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಿದರು.

ಫೈನಲ್ ಪಂದ್ಯದಲ್ಲಿ ಕಪ್ ಗೆಲ್ಲುವುದೇ ತಂಡಗಳ ಗುರಿ ಆಗಿರುವುದರಿಂದ ಅಭ್ಯಾಸ ಪಂದ್ಯಗಳ ಟ್ವಿಟರ್ ಟೂರ್ನಿಯಲ್ಲಿ ಎದುರಾಳಿ ತಂಡಗಳಿಗೆ ಕಪ್ಪು ಬಳಿದು, ಶಕ್ತಿ ಕುಂದಿಸಲು ಎಲ್ಲ ತಂಡಗಳು ತಂತ್ರಗಾರಿಕೆ ಆಟ ಆಡುತ್ತಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು