ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಕಿರಿ ಕಿರಿ ಅಬ್ಕಾರಿ!

Published : 27 ಸೆಪ್ಟೆಂಬರ್ 2024, 18:34 IST
Last Updated : 27 ಸೆಪ್ಟೆಂಬರ್ 2024, 18:34 IST
ಫಾಲೋ ಮಾಡಿ
Comments

‘ನಾವೂ ಅಬ್ಕಾರಿ ಇಲಾಖೆ ಸೇರ್ಕಬೇಕಿತ್ತು ಕಣ್ರಲಾ’ ಹರಟೆಕಟ್ಟೇಲಿ ಮಾತು ತೆಗೆದ ಗುದ್ಲಿಂಗ.

‘ಈಗೇನ್ ನಿಂಗ್ ಕಮ್ಮಿಯಾಗೈತೆ? ಕಂಠಮಟ್ಟ ಕುಡ್ಕಂಡೇ ತೇಲಾಡ್ತಿರ್ತೀಯ’ ಎಂದ ಮಾಲಿಂಗ.

‘ಅಂಗಲ್ಲ ಕಣಲೇ, ಇದು ಪ್ರಾಣ ಓಗೋರ್ ಬಾಯಿಗೆ ನೀರು ಬಿಟ್ಟಂಗಿರ್ತದೆ. ಸಂಜೆ ಆತು ಅಂದ್ರೆ ಕಾಸು ಎಲ್ ವಂಚಾದು ಯೋಳು? ಅಲ್ಲಾದ್ರೆ ಕ್ರೇಟ್‍ಗಟ್ಲೆ ಬಾಟ್ಲು ಬಿದ್ದಿದಾವಂತೆ’.

‘ಓ... ಲೋಕಾಯುಕ್ತ ದಾಳಿ ಬಗ್ಗೆ ಯೋಳ್ತಿದೀಯಾ? ಬರಿ ಬಾಟ್ಲೇ ಅಲ್ಲ ಕಣಮ್ಮಣ್ಣಿ, ಡ್ರಗ್ಸು, ಗಾಂಜಾ ಸಿಗ್ರೇಟು ಎಲ್ಲಾ ಸಿಕ್ಕವಂತೆ’.

‘ರೈಡ್ ಮಾಡಿರ್ತಾರಲ್ವಾ? ಅದ್ನ ಅಂಗೇ ತಂದಾಕ್ಕಂಡಿರ್ತಾರೆ’ ಅಂದ ಕಲ್ಲೇಶಿ.

‘ಅದ್ಕೆಲ್ಲಾ ಲೆಕ್ಕ ಮಡಗ್ಬೇಕಲ್ವಾ?’

‘ಲೆಕ್ಕ ಯಾಕ್ ಮಡ್ಗೀಯ? ಪೇಪರ‍್ರೋರು ಬರ್ದಿರ್ತಾರಲ್ಲ, ಇನ್ನು ರೇಡ್ ಮಾಡಿ ತಕಂಬಂದಿರಾದು ಒರಿಜಿನಲ್ ಬ್ರಾಂಡಾ, ಪೊಟ್ಟಣ ಕಟ್ಟಿರಾದು ಡ್ರಗ್ಸೆಯೇ ಅಂತ ಕ್ವಾಲಿಟಿ ಚೆಕ್ ಮಾಡಬೇಕಂದ್ರೆ ಅದ್ನ ಬಾಯಿಗೆ ಸುರ್ಕಳಾದು ಬಿಟ್ಟು ಮೆಶೀನ್ಗೆ ಸುರಿಯಕ್ಕಾಯ್ತದಾ? ನಿಧಾನಕ್ ವಿಲೇವಾರಿ ಮಾಡಿ ಮುಗ್ಸೋರು. ಅಷ್ಟರಲ್ಲೇ ಲೋಕಾಯುಕ್ತದೋರು ಅವಸರ ಬಿದ್ದು ಬಂದು ಚೆಕ್ ಮಾಡವ್ರೆ’.

‘ಅದೂ ದಿಟ ಬಿಡ್ಲಾ! ಜೇನುಹುಟ್ಟು ಕಿತ್ತೋನಿಗೆ ಕೈ ನೆಕ್ಕಬೇಡ ಅಂದ್ರೆ ಎಂಗ್ಲಾ?’

‘ವೂ ಕಣ್ಲಾ! ಎಣ್ಣೆ ಲೈಸೆನ್ಸು, ಪರ್ಮಿಟ್ಟು ಅಂತ ಬಂದೋರಿಗೇನು ಕಾಪಿ, ಟೀ ತರ್ಸಕ್ಕಾಯ್ತದಾ? ಅವರವರ ಘನತೆಗೆ ತಕ್ಕಂಗೆ ಎಣ್ಣೆ ಟ್ರೀಟ್ ಕೊಟ್ರೆ ತಾನೆ ಇಲಾಖೆಗೂ ಒಂದು ಕಿಮ್ಮತ್ತು ಬರೋದು’.

‘ಬೇಲಿಯೇ ಎದ್ದು ಹೊಲ ಮೇದಂಗೆ’ ಅನ್ನೋದನ್ನ ‘ಇಲಾಖೆಯೇ ಎಣ್ಣೆ ಕುಡಿದು ಮಲಗ್ದಂಗೆ’ ಅಂತ ಗಾದೆ ಮಾಡ್ಬಹುದು’.

‘ಹೆಚ್ಚು ಆದಾಯ ಕೊಡೋ ಇಲಾಖೆಗಳಲ್ಲೇ ಇಂಗಾಗ್ಬುಟ್ರೆ ಸರ್ಕಾರಕ್ಕೆ ಏನ್ರಲಾ ಸಿಗ್ತದೆ? ಅಬ್ಕಾರಿ, ಕಂದಾಯ, ಇವನ್ನೆಲ್ಲಾ ಲೋಕಾಯುಕ್ತದ ವ್ಯಾಪ್ತಿಯಿಂದ ಈಚೆ ಮಡಗ್ಬೇಕು ಅಂತ ಒಂದು ಮಸೂದೆ ಮಾಡ್ಬೇಕು’.

‘ಮಸೂದೆಗೆ ಬಿದ್ದೀತು ಪೂರಾ ವೋಟು. ಆದರೆ ಮೇಲೊಬ್ರು ಇದಾರಲ್ಲ, ಗೆಹಲೋತು, ಅವರು ಸೈನ್ ಮಾಡ್ಬೇಕಲ್ಲ’ ಎಂದ ಪರ್ಮೇಶಿ.

ಎಲ್ಲಾ ಗೊಳ್ಳನೆ ನಕ್ಕರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT