ಮಂಗಳವಾರ, ಜನವರಿ 31, 2023
18 °C

ಚುರುಮುರಿ: 2022ರ ಸಾಧನಾ ಪಟ್ಟಿ

ಸುಮಂಗಲಾ Updated:

ಅಕ್ಷರ ಗಾತ್ರ : | |

ಬೆಕ್ಕಣ್ಣ ಬಲುಗಂಭೀರವಾಗಿ ಕೂತು 2022ರ ಮಹಾನ್ ಸಾಧನೆಗಳ ಪಟ್ಟಿ ಮಾಡುತ್ತಿತ್ತು.

‘ವರ್ಣಮಾಲೆವಳಗ ‘ಅಂ’ಗಿಂತ ‘ಅ’ ಮೊದಲು ಇರತೈತಿ ಅಂತ ನಮ್ಮ ಅದಾನಿ ಅಂಕಲ್ಲು ಸಾಬೀತುಪಡಿಸ್ಯಾನ. ಕೋವಿಡ್ ಕಾಲದಾಗೆ ಅದಾನಿ ಅಂಕಲ್ಲು ಸಂಪತ್ತು ಡಬ್ಬಲ್ಲು- ಟ್ರಿಪ್ಪಲ್ಲು ಆಗೈತಿ. ಅಂಬಾನಿ ಹಿಂದೆ ಹಾಕಿ, ವಿಶ್ವದಾಗೆ ಮೂರನೇ ಸ್ಥಾನಕ್ಕೆ ಏರಿ, ದೊಡ್ಡ ಮಾಧ್ಯಮ ಸಂಸ್ಥೆನೂ ಕೊಂಡುಕೊಂಡಿದ್ದು ಭಯಂಕರ ಸಾಧನೆ’ ಎನ್ನುತ್ತ ಪಟ್ಟಿಯಲ್ಲಿ ಅದಾನಿ ಹೆಸರು ಮೊದಲು ಬರೆಯಿತು.

‘ಇಡೀ ಮಾಧ್ಯಮ ಸಂಸ್ಥೆ ಖರೀದಿ ಮಾಡಿದರೇನಾತು... ಒಬ್ಬ ಪತ್ರಕರ್ತನನ್ನ ಮಾತ್ರ ಖರೀದಿ ಮಾಡಾಕೆ ಆಗಲಿಲ್ಲ’ ಎಂದು ನಾನು ಛೇಡಿಸಿದೆ. ಬೆಕ್ಕಣ್ಣ ಲಕ್ಷ್ಯವನ್ನೇ ಕೊಡಲಿಲ್ಲ.

‘ಮೂರು– ನಾಕು ದಶಕದಿಂದ ಇದ್ದ ಭ್ರಷ್ಟಾಚಾರ, ಗಡಿವಿವಾದ ಎರಡೂ ಸಮಸ್ಯೆಗಳು ನಾಮೇಲು ತಾಮೇಲು ಅಂತ ಕರುನಾಡಿನ ಪ್ರಾಣ ತಿನ್ನೂ ಸಾಧನೆ ಮಾಡ್ಯಾವು’ ಎನ್ನುತ್ತ ಅವೆರಡನ್ನೂ ಎರಡನೇ ಸ್ಥಾನದಲ್ಲಿ ಬರೆಯಿತು.

‘ಕಮಲಕ್ಕನ ಮನಿಯವ್ರಿನ್ನ ಮರೆತೆಯೇನಲೇ... ಮುಂದಿನ ಚುನಾವಣೆ ಗೆಲ್ಲೋ ಆಯುಧಗಳನ್ನು ಈಗೇ ಚೂಪು ಮಾಡಿಟ್ಟುಕೊಂಡಾರ’ ಎಂದೆ.

‘ಉಳಿದವ್ರು ಒಬ್ಬರನ್ನೊಬ್ಬರು ಕಾಲೆಳೆಯೋ ಕೆಲಸ ಮಾಡತಿದ್ದರೆ, ಇವ್ರು ತಮ್ಮ ಕೋಟೆ ವಿಸ್ತರಣೆಗೆ ಈಗೇ ಪ್ಲಾನು ಮಾಡ್ಯಾರ. ಕಡಿಮೆ ಸಾಧನೆಯೇನು ಮತ್ತ’ ಎನ್ನುತ್ತ ಕಮಲಕ್ಕನ ಮನಿಯವ್ರಿನ್ನ ಮೂರನೇ ಸ್ಥಾನದಲ್ಲಿಟ್ಟಿತು.

‘ನಿಮ್ಮ ಕುಮಾರಣ್ಣಂಗೆ ರೈತ್ರು ಹಾಕಿದ ಬೃಹತ್ ಹಾರಗಳು ಏನೋ ರೆಕಾರ್ಡ್ ಆಗೈತಂತ’.

‘ಹಾರ ಯಾರೇ ಮಾಡಿರಲಿ, ಹಾಕಿಸ್ಕೆಂಡಿದ್ದೇ ರೆಕಾರ್ಡ್’ ಎನ್ನುತ್ತ ಕುಮಾರಣ್ಣನ ಹೆಸರನ್ನು ನಾಕನೇ ಸ್ಥಾನದಲ್ಲಿ ಬರೆಯಿತು.

‘ಯಾರು ಏನು ಕಹಿ ಉಗುಳಿದ್ರೂ, ಬೈದ್ರೂ, ರಾಗಾ ಅಂಕಲ್ಲು ತೆಲಿನೇ ಕೆಡಿಸ್ಕೊಳದೇ ಪ್ರೀತಿ ಮಾತಾಡಿಕೋತ ಮೂರೂವರೆ ಸಾವಿರ ಕಿಲೊಮೀಟರ್ ನಡೆದಾನ. ಅದಾನಿ ಬದಲಿಗೆ ರಾಗಾನನ್ನೇ ಮೊದಲಿನ ಸ್ಥಾನದಾಗೆ ಇಡಬೌದೇನೋ...’ ಎಂದು ವರ್ಷದ ಕೊನೆಯಲ್ಲೊಮ್ಮೆ ಜಾಣತನದ ಮಾತಾಡಿದ ಬೆಕ್ಕಣ್ಣ ‘ಶ್ರೀಸಾಮಾನ್ಯರಿಗೆ ಮಾತ್ರ ಸಾಧನೆ ಪಟ್ಟಿವಳಗ ಕೊನೆಯ ಸ್ಥಾನ’ ಎನ್ನುತ್ತ ನನ್ನ ಮೂತಿಗೆ ತಿವಿಯಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.