ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಲಾಪ ಕಪ್

Last Updated 14 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

‘ಆಡಳಿತ ಪಕ್ಷ, ವಿರೋಧ ಪಕ್ಷಗಳ ನಡುವಿನ ಚಳಿಗಾಲದ ಟೂರ್ನಿಯ ಕಲಾಪ ಕಪ್ ಯಾರ ಪಾಲಾಗಬಹುದು?’ ಸುಮಿ ಕೇಳಿದಳು.

‘ಇದು ಸೀಮಿತ ಓವರ್‌ಗಳ ಒನ್ ಡೇ ಟೂರ್ನಿ ಅಲ್ಲ, ಟೆನ್ ಡೇ ಮ್ಯಾಚ್. ಎದುರಾಳಿ ಗಳಿಗೆ ಎದುರೇಟು ಕೊಟ್ಟು ಮುಖಭಂಗ ಮಾಡು ವವರು ವಿಜೇತರಾಗಬಹುದು’ ಅಂದ ಶಂಕ್ರಿ.

‘ಆಡಳಿತ ವೈಫಲ್ಯ, ಅಭಿವೃದ್ಧಿ ಕುಂಠಿತ, ಭ್ರಷ್ಟಾಚಾರದ ಬಾಲ್‍ಗಳನ್ನು ಎಸೆದರೆ ಆಡಳಿತ ಪಕ್ಷವನ್ನು ಆಲೌಟ್ ಮಾಡಬಹುದು ಅಲ್ವೇನ್ರೀ?’

‘ಸುಲಭವಲ್ಲ, ಅಪಾಯಕಾರಿ ಬಾಲ್‍ಗಳನ್ನು ರಕ್ಷಣಾತ್ಮಕವಾಗಿ ಆಡಿ, ಕಳಪೆ ಎಸೆತಗಳಿಗೆ ತಕ್ಕ ಉತ್ತರ ನೀಡಿ ತಂಡದ ಸ್ಕೋರ್ ಹೆಚ್ಚಿಸಿಕೊಳ್ಳುವ ಪರಿಣತ ಬ್ಯಾಟರ್‌ಗಳು ಆಡಳಿತ ಪಕ್ಷದಲ್ಲಿಇದ್ದಾರಂತೆ’.

‘ಪರ್ಸೆಂಟೇಜ್ ದೌರ್ಬಲ್ಯದ ಸ್ಪಿನ್ ದಾಳಿ ಮಾಡಿದರೆ ಫೇಸ್ ಮಾಡಲಾಗದ ಬ್ಯಾಟರ್‌ ಗಳನ್ನು ಎಲ್‍ಬಿಡಬ್ಲ್ಯುಗೆ ಕೆಡವಬಹುದು ಕಣ್ರೀ...’

‘ಸೂಕ್ತ ಪುರಾವೆ ಪ್ರದರ್ಶಿಸದ ಕಾರಣ ಅದು ನೋ ಬಾಲ್ ಆಗಬಹುದು’.

‘ಇಷ್ಟಕ್ಕೇ ವಿರೋಧ ಪಕ್ಷದವರು ಪಂದ್ಯವನ್ನು ಕೈ ಚೆಲ್ಲಲಾರರು, ತಮ್ಮ ಬತ್ತಳಿಕೆಯಲ್ಲಿರುವ ಮತ್ತಷ್ಟು ಮಾರಕ ಅಸ್ತ್ರಗಳನ್ನು ಪ್ರಯೋಗಿಸಿ ಆಡಳಿತ ಪಕ್ಷದ ಮುಖಭಂಗ ಮಾಡ್ತಾರೆ ನೋಡ್ತಿರಿ...’

‘ಅಂಥಾ ಇಕ್ಕಟ್ಟಿನ ಸಂದರ್ಭ ಎದುರಾದರೆ ಆಡಳಿತ ಪಕ್ಷವು ಮತಾಂತರ ನಿಷೇಧದ ರಕ್ಷಣಾತ್ಮಕ ಆಟಕ್ಕೆ ಮೊರೆಹೋಗಿ ಎದುರಾಳಿ ಬೌಲರ್‌ಗಳ ತಾಳ್ಮೆ ಕೆಡಿಸಬಹುದು’.

‘ಜಾತಿಮತದ ವಿರುದ್ಧದ ಆಟ ಆಡೋದು ಕಷ್ಟವೇನ್ರೀ?’

‘ಹೌದು, ಆಹಾರ ಪದ್ಧತಿ ಹಾಗೂ ಜಾತಿ ಇವೆರಡೂ ಅಪಾಯಕಾರಿ. ಇವುಗಳ ವಿರುದ್ಧ ಆಡಿ ಗೆದ್ದವರಿಲ್ಲ. ಅದರಲ್ಲೂ ಜಾತಿ ಎಂಬುದು ಸರ್ಕಸ್ ಸಿಂಹ ಇದ್ದಂತೆ. ಅದರ ಆಟ ನೋಡಿ ಕೊಂಡು ಆನಂದಪಡಬೇಕಷ್ಟೇ. ಕೆಣಕಿದರೆ ಮೈಮೇಲೆ ಬಿದ್ದು ಅನಾಹುತ ಮಾಡಿಬಿಡುತ್ತದೆ’.

‘ಹೀಗಾದ್ರೆ, ಕಲಾಪ ಟೂರ್ನಿಯ ಚೆಂಡಾಟ ಮತ್ತೊಂದು ಭಂಡಾಟದಂತಾಗಿ ಫಲಿತಾಂಶ ಬಾರದೆ ನೀರಸ ಡ್ರಾನಲ್ಲಿ ಮುಗಿಯುತ್ತೇನೊ ಕಣ್ರೀ...’ ಸುಮಿ ಅನುಮಾನ ವ್ಯಕ್ತಪಡಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT