ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಿ, ಮಂಗಳಾರ್ತಿ!

Last Updated 23 ಜುಲೈ 2020, 19:31 IST
ಅಕ್ಷರ ಗಾತ್ರ

‘ಏನ್ ದುಬ್ಬೀರ್ ಮಾವ, ಮೊನ್ನಿ ಭೀಮನಮಾಸಿ ಪಾದಪೂಜಿ ಜೋರಾತ? ಅತ್ತಿ ಏನಡಗಿ ಮಾಡಿತ್ತು?’ ಕೊಟ್ರೇಶಿ ಚಾ ಕುಡಿಯುತ್ತ ವಿಚಾರಿಸಿದ.

‘ಆತಪ, ಚೆನ್ನಾಗಾತು. ನಿಮ್ಮತ್ತಿ ಹೂವು ಪತ್ರಿ ಏರಿಸಿ ಚೆನ್ನಾಗಿ ಮಂಗಳಾರತಿ ಮಾಡಿದ್ಲು. ಇನ್ನು ಅಡಿಗಿ ಕತಿ ಹೇಳಂಗಿಲ್ಲ ಬಿಡು’ ಎಂದ ದುಬ್ಬೀರ.

‘ಲೇ ದುಬ್ಬೀರ, ನಿಂಗೆ ಮಂಗಳಾರತಿ ದಿನಾ ಆಗ್ತಿರ್ತಾವು. ಅದು ಬಿಡು, ಪಾದಪೂಜಿ ಬಗ್ಗೆ ಹೇಳು’ ಗುಡ್ಡೆ ನಕ್ಕ. ‘ನನ್ ಪಾದಪೂಜಿ ತಗಂಡ್ ಏನ್ಮಾಡ್ತಿರಲೆ, ನಿಮ್ಮವು ನೋಡ್ಕಳ್ರಿ. ನಿಮ್ ಹೆಂಡ್ತೀರೇನು ನಿಮ್ಮನ್ನ ತೂಗುಮಂಚದಾಗಿಟ್ಟು ತೂಗ್ತಾರೇನು?’ ದುಬ್ಬೀರನಿಗೆ ಸಿಟ್ಟು ಬಂತು.

‘ಸಿಟ್ಯಾಕಲೆ ದುಬ್ಬೀರ, ತೆಪರೇಸಿ ನೋಡು, ಹೆಂಡ್ತಿ ಮುಂದೆ ಯಾವಾಗ್ಲೂ ತೆಪ್ಪಗಿರ್ತಾನೆ. ಅದ್ಕೆ ಅರಾಮದಾನೆ...’ ಗುಡ್ಡೆ ಸಮಾಧಾನ ಹೇಳಿದ.

‘ನಿಮಗೊಂದ್ ವಿಷಯ ಗೊತ್ತಾ?’ ಕಿಸಗುಡುತ್ತಲೇ ಕೇಳಿದ ಕೊಟ್ರೇಶಿ, ‘ಮೊನ್ನಿ ದುಬ್ಬೀರ ಮಾವ ಕೊರೊನಾ ಹೆಲ್ಪ್‌ಲೈನ್‍ಗೆ ಫೋನ್ ಮಾಡಿತ್ತಂತೆ...’ ಅಂದ.

ತಕ್ಷಣ ದುಬ್ಬೀರ ‘ಲೇ ಕೊಟ್ರ, ಬ್ಯಾಡ ನೋಡು’ ಎಂದು ಗುರಾಯಿಸಿದ.

‘ಏಯ್, ಯಾಕ್ ಬ್ಯಾಡ? ಹೇಳ್ಲಿಬಿಡು. ನೀ ಹೇಳಲೆ ಕೊಟ್ರ’ ತೆಪರೇಸಿ ಎತ್ತಿಕೊಟ್ಟ.

‘ಏನಿಲ್ಲ, ಮಾವ ಮೊನ್ನಿ ಕೊರೊನಾ ಹೆಲ್ಪ್‌ಲೈನ್‍ಗೆ ಫೋನ್ ಮಾಡಿ, ಅರವತ್ತು ವರ್ಷ ಆದೋರು ಮನಿ ಹೊರಗೆ ಅಡ್ಡಾಡಬಾರದು ಅಂತ ರೂಲ್ಸ್ ಮಾಡೀರಲ್ಲ, ನನ್ ಹೆಂಡ್ತಿ ಯಾವಾಗ್ಲೂ ಹೊರಗೇ ಇರ್ತಾಳೆ. ಮಾಸ್ಕ್ ಹಾಕಲ್ಲ. ಬಂದು ಹಿಡ್ಕಂಡ್ ಹೋಗ್ರಿ’ ಅಂತಂತೆ.

‘ಹೌದಾ? ಆಮೇಲೆ?’ ಗುಡ್ಡೆಗೆ ಕುತೂಹಲ.

‘ಹೆಲ್ಪ್‌ಲೈನ್‍ನೋರು ಮಾವನ ಪೋನ್ ನಂಬರ್ ಚೆಕ್ ಮಾಡಿ ‘ಮೊನ್ನೆ ಇದೇ ನಂಬರಿಂದ ಪೋನ್ ಬಂದಿತ್ತು. ನಮ್ ಯಜಮಾನ್ರು ಯಾವಾಗ್ಲೂ ಹೊರಗೆ ಅಡ್ಡಾಡ್ತಾರೆ, ಬಂದು ಹಿಡ್ಕಂಡ್ ಹೋಗ್ರಿ ಅಂತ ಒಬ್ರು ಲೇಡಿ ಕಂಪ್ಲೇಂಟ್ ಮಾಡಿದ್ರು. ಆ ಯಜಮಾನ್ರು ನೀವೇನಾ? ಅಂತ ಕೇಳಿದ್ರಂತೆ. ಮಾವ ಅವತ್ತು ಪೋನಿಟ್ಟೋನು ಇವತ್ತಿನ್‍ತಂಕ ಪೋನ್ ಮುಟ್ಟಿಲ್ಲಂತೆ’

ಕೊಟ್ರೇಶಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT