ಸೋಮವಾರ, ಫೆಬ್ರವರಿ 24, 2020
19 °C

ಬೆಕ್ಕಣ್ಣನ ಬಜೆಟ್

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಬೆಕ್ಕಣ್ಣ ಬಾಲ್ಕನಿಯ ಮೂಲೆಯಲ್ಲಿ ತಪಸ್ಸು ಮಾಡುವಂತೆ ಕೂತಿತ್ತು. ನನ್ನ ನೋಡಿದ್ದೇ, ‘ಶ್’ ಎಂದು ಬಾಯಿ ಮೇಲೆ ಬೆರಳಿಟ್ಟು ‘ಸದ್ದು ಮಾಡಬ್ಯಾಡ. ಬಿಲದ ಕೊನೇಲಿರೋ ಇಲಿನೂ ಹೊರಗ ಬರ‍್ಲಿ ಅಂತ ಮೋದಿಮಾಮಾ ಟೈಮ್ ಕೊಟ್ಟಾನಂತ. ಆ ಕೊನೇ ಇಲಿನ ನಾನೇ ಹಿಡಿಬೇಕಂತ ಕೂತೀನಿ’ ಎಂದು ಪಿಸುಗುಟ್ಟಿತು.

ಕೂತು ಕೂತು ಸಾಕಾಗಿ, ‘ನಾ ರಾಜಾಹುಲಿ. ಹಂಗಾಗಿ ಯಾವ ಇಲಿನೂ ಹೊರಬೀಳಂಗಿಲ್ಲ’ ಎನ್ನುತ್ತ ಓಡಿತು. ಸಂಜೆ ಕಂಕುಳಲ್ಲಿ ಕೆಂಪು ಗಂಟು ಹಿಡಿದು ಒಳಬಂದಿತು.

‘ಏನಲೇ ಅದು...’

‘ಅಷ್ಟೂ ಗೊತ್ತಾಗಂಗಿಲ್ಲೇನು... ಬಜೆಟ್ ಬಹಿಖಾತ’ ಎಂದು ಹಲ್ಲು ಕಿಸಿದು, ಗಂಟು ಬಿಚ್ಚಿತು.

‘ನಿಮ್ಮ ನಿರ್ಮಲಕ್ಕ ಎರಡೂವರೆ ಗಂಟೆ ಬಜೆಟ್ ಭಾಷಣ ಮಾಡ್ಯಾರ, ಜಿಡಿಪಿ 10ಕ್ಕೆ ಒಯ್ತೀವಿ ಅಂತ್ಹೇಳಿ, ಕಿಸಾನ್ ರೈಲು ಹತ್ತಿಸಿ, ಎಲ್ಲರ ಕೈಗೂ ಕಾಮನಬಿಲ್ಲು ಕೊಡ್ತೀವಿ ಅಂತ ಹೇಳ್ಯಾರ. ಮತ್ತ ನಿಂದೇನಲೇ ಹೊಸಾ ಬಜೆಟ್’ ಎಂದೆ.

‘ಆಕಿ ಹೇಳಾಕ ಮರೆತಿದ್ದು ಈ ಬಜೆಟ್ಟಿನಾಗ ಐತಿ’ ಎಂದು ಗಂಟಲು ಸರಿಪಡಿಸಿಕೊಂಡು ಓದತೊಡಗಿತು:

‘ಐ.ಟಿ ಹಬ್ ಬೆಂಗಳೂರನ್ನು ಹಿಂದುತ್ವದ ಹಬ್ ಮಾಡಾಕ ನೂರು ಕೋಟಿ ರೂ. ಅನುದಾನ. ಸಾವರ್ಕರ್ ಅಧ್ಯಯನಪೀಠ ಸ್ಥಾಪನೆ ಮತ್ತು ಪತಿತಪಾವನ ದೇವಸ್ಥಾನಗಳ ನಿರ್ಮಾಣಕ್ಕೆ ನೂರು ಕೋಟಿ ರೂ. ಅನುದಾನ. ಎಡಬಿಡಂಗಿ ಹಾವುಗಳಿಗೆ, ರಾಷ್ಟ್ರ ವಿರೋಧಿಗಳಿಗೆ ಗುರಿ ಇಡುವ ರಾಷ್ಟ್ರಪ್ರೇಮಿ ಗುರಿಕಾರರಿಗೆ ತರಬೇತಿ ಮತ್ತು ನಾಡಬಂದೂಕು ಪೂರೈಕೆಗೆ ನೂರು ಕೋಟಿ ಅನುದಾನ. ‘ನಿನ್ನ ದಾಖಲೆಗಳನ್ನು ಯಾವಾಗ ಕೊಡುತ್ತೀ’ ಅಂತೆಲ್ಲ ಮೋದಿಮಾಮಂಗ ಕೇಳಿ ಪದ್ಯ ಬರೀತಾರಲ್ಲ, ಅಂಥವ್ರನ್ನ ಮತ್ತು ಪೌರತ್ವ ದಾಖಲೆ ಸರಿಯಿಲ್ಲದವರನ್ನ ಹಿಡಿದಿಡೋ ಬಂಧನಕೇಂದ್ರ ನಿರ್ಮಾಣಕ್ಕೆ ನೂರು ಕೋಟಿ ಅನುದಾನ. ವಾಟ್ಸ್‌ಆ್ಯಪ್ ವಿ.ವಿ, ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡೋ ನಿರುದ್ಯೋಗಿ ಭಕ್ತರಿಗೆ ಯುಜಿಸಿ ಶ್ರೇಣಿ ವೇತನ’ ಓದಿ ಮುಗಿಸಿದ ಬೆಕ್ಕಣ್ಣ ‘ಇದ್ನೆಲ್ಲ ಯೆಡ್ಯೂರಜ್ಜ ನಮ್ಮ ಬಜೆಟ್ಟಿನಾಗ ಸೇರಿಸ್ತಾನ’ ಎಂದು ಕೊಂಕು ನಗೆ ಬೀರಿತು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)