ಮಂಗಳವಾರ, ಅಕ್ಟೋಬರ್ 20, 2020
23 °C

ಚುರುಮುರಿ | ಕ್ಯಾಟ್ ವೈರಸ್!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಮಾನವಾ... ಮೂಳೆ ಮಾಂಸದ ತಡಿಕೇ...’ ಎಂದು ಹಾಡುತ್ತ ತೂರಾಡುತ್ತ ಹರಟೆಕಟ್ಟೆಗೆ ಬಂದ ತೆಪರೇಸಿ.

ಅವನ ತೂರಾಟ ನೋಡಿದ ಗುಡ್ಡೆ, ‘ಕತ್ತಲಾಗೋಕೂ ಮೊದ್ಲೇ ಗುಂಡು ಹಾರೇತಲೇ ಪರಾಕ್!’ ಎಂದು ನಕ್ಕ. ತೆಪರೇಸಿಗೆ ಸಿಟ್ಟು ಬಂತು. ‘ಹೌದಲೆ, ಗುಂಡು ಹಾರೇತಿ... ಏನೀಗ? ಜನರ ಪ್ರಾಣನೇ ಹಾರಿ ಹೋಗ್ತದಾವು. ನಿನ್ನಿದ್ದೋನು ಇವತ್ತಿಲ್ಲ, ಇವತ್ತಿದ್ದೋನು ನಾಳಿಲ್ಲ. ನನ್ನ ಅಗದಿ ಕ್ಲೋಸ್ ಫ್ರೆಂಡ್ ಒಬ್ಬ ಇವತ್ತು ಸತ್ತೋದ. ಅದ್ಕೆ ತೆಲಿ ಕೆಟ್ಟು ಹಾಕ್ಕಂಡ್ ಬಂದೆ’ ಅಂದ.

‘ಅಲ್ಲೋ ತೆಪರ, ಗುಂಡಾಕಿದ್ರೆ ಸಮಸ್ಸಿ ಎಲ್ಲ ಬಗೆಹರೀತಾವಾ? ಎದುರಿಸ್ಬೇಕು ಕಣಲೆ...’ ದುಬ್ಬೀರ ಬುದ್ಧಿವಾದ ಹೇಳಿದ.

‘ಏನ್ ಎದುರಿಸ್ತೀಯಪ ಬದ್ನೇಕಾಯಿ, ಕೊರೊನಾ ಬಂದ್ರೆ ಮುಗೀತು. ಆಸ್ಪತ್ರೇಲಿ ಬೆಡ್ ಸಿಗಲ್ಲ, ಆಕ್ಸಿಜನ್ ಸಿಗಲ್ಲ, ವೆಂಟಿಲೇಟ್ರು ಸಿಗಲ್ಲ. ಸತ್ರೆ ಹೆಣ ನೋಡಾಕೆ ಬಂಧು ಬಳಗ ಬರಲ್ಲ. ಯಾವ ಗುಂಡಿಗೆ ಯಾವ ಹೆಣ ಬಿಸಾಕ್ತಾರೋ ಯಾರಿಗೂ ಗೊತ್ತಾಗಲ್ಲ. ನಮ್ ಜೀವಕ್ಕೇನ್ ಬೆಲೆನೇ ಇಲ್ವ?’

‘ಕೊರೊನಾ ಬರದಂಗೆ ನೋಡ್ಕಂಡ್ರೆ ಆತಪ. ಕುಡುದ್ರೆ ಕೊರೊನಾ ಓಡಿ ಹೋಗುತ್ತಾ?’

‘ಕೊರೊನಾ ಬಿಡು, ಈಗ ಇನ್ನೊಂದೆಂತದೋ ‘ಕ್ಯಾಟ್’ ಅಂತ ಬೆಕ್ಕಿನ ವೈರಸ್ ಬಂದೇತಂತೆ? ಟೀವಿಲಿ ತೋರಿಸ್ತಿದ್ರು. ಅದು ಬಂದ್ರೆ ಅಪೀಲೇ ಇಲ್ವಂತೆ, ಹಲಗಿ ಹೊಡ್ಸೋದೇ...’

‘ಲೇ ತೆಪರ, ಅದು ಬೆಕ್ಕಿನದಲ್ಲ, ಸೊಳ್ಳೆ, ಹಂದಿಯಿಂದ ಬರೋದು. ನೀನು ಜಾಸ್ತಿ ಟೀವಿ ನೋಡಬ್ಯಾಡ ಅಂತ ಅವತ್ತೇ ಹೇಳಿಲ್ವ?’ ಪರ್ಮೇಶಿ ಗದರಿದ.

‘ಸೊಳ್ಳೆ, ಹಂದಿ, ನಾಯಿನರಿಗಳೆಲ್ಲ ನಮ್ಮನ್ನ ಹೆದರ್ಸಂಗಾದ್ವು. ಅದ್ಕೇ ನಾ ಯಾವಾಗ್ಲೂ ಹೇಳೋದು...’

‘ಏನು?’

‘ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ, ಇರೋ ಅಷ್ಟ್ ದಿನ ಎಲ್ರೂ ಒಂದೊಂದ್ ಗ್ಲಾಸ್ ಎತ್ರಲೆ, ಎತ್ರಲೆ...’

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.