ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸೀಡಿ ಪಾಶ

Last Updated 4 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಫೈಲೊಂದರ ಅಪ್ರೂವಲ್‍ಗೆಂದು ಬಾಸ್ ಹತ್ರ ಹೊರಟಿದ್ದೆ. ಅಷ್ಟರಲ್ಲಿ ಪಿ.ಎ. ಸತ್ಯ ಕೋಣೆಗೆ ನುಗ್ಗಿದ. ‘ಪಾಶ ಅನ್ನೋರು ನಿಮ್ಮನ್ನು ನೋಡ್ಬೇಕಂತೆ, ಸೀಡಿ ತೊಗೊಂಡ್ಬಂದಿದಾರಂತೆ, ಕಳಿಸ್ಲಾ?’ ಅಂದ. ಕೂಡಲೇ ನನ್ನ ಕೈಲಿದ್ದ ಫೈಲ್‍ ಕೆಳಗೆ ಬಿತ್ತು. ‘ಬಿಸಿಯಾಗಿದ್ದಾರೆ ಅನ್ನು’ ಅಂತ ಹೇಳಿ ಫ್ಯಾನ್ ಹಾಕಿದೆ.

ಹತ್ತು ವರ್ಷದ ಹಿಂದೆ ಕಾಲೇಜಿನಲ್ಲಿ ಜತೆಯಾಗಿದ್ದ ಹುಡುಗಿ ಮೊನ್ನೆ ಫೇಸ್‍ಬುಕ್‍ನಲ್ಲಿ ಸಿಕ್ಕಿದ್ಲು. ಕೊರೊನಾದಿಂದ ಕೆಲ್ಸ ಕಳ್ಕೊಂಡ್ಲೂಂತ ಗೊತ್ತಾಯ್ತು. ಟೆಲಿಫೋನಿಕ್ ಇಂಟರ್ವ್ಯೂ ನಾನೇ ತಗೊಂಡು ನಮ್ಮ ಕಂಪನೀಗೆ ಅವ್ಳನ್ನ ರೆಕಮಂಡ್ ಮಾಡಿದ್ದೆ. ಅವತ್ತೇ ಸಂಜೆ ಕಾಫಿಡೇಯಲ್ಲಿ ಇಬ್ರೂ ಭೇಟಿಯಾಗಿದ್ವಿ. ಎರಡು ಗಂಟೆ ಕಿಲಕಿಲ ಅಂತ ಮಾತಾಡಿದ್ವಿ. ಆಗ ಯಾರಾದ್ರೂ ನಮ್ಮಿಬ್ರ ಫೋಟೊ, ವಿಡಿಯೊ ತೊಗೊಂಡಿರಬಹುದು. ಅದ್ರ ಸೀಡೀನ ಈ ಪಾಶ ಅನ್ನೋವ್ರು ತಂದಿರಬಹುದು. ಯೋಚಿಸ್ತಿದ್ದಂತೆ ತಲೆ ಸಿಡಿಯೋಕ್ಕೆ ಶುರುವಾಯ್ತು.

ಸತ್ಯ ಮತ್ತೆ ಬಂದ. ‘ಆ ಪಾಶ ಇಷ್ಟೊತ್ತೂ ಕಾಯ್ತಿದ್ರು. ಸೀಡೀನ ಮನೆಯಲ್ಲೇ ಕೊಟ್ಟು ಹೋಗ್ತಾರಂತೆ’ ಎಂದ. ಎದೆ ಧಸಕ್ಕೆಂದಿತು.

ಬಾಸ್ ಕೈಲಿ ಸೈನ್ ಹಾಕಿಸ್ಬೇಕೂಂತಿದ್ದ ಆ ಹುಡುಗಿಯ ರೆಕ್ರೂಟ್‍ಮೆಂಟ್ ಫೈಲ್ ಕಬೋರ್ಡಿನಲ್ಲಿ ಮುಚ್ಚಿಟ್ಟೆ. ಬಾಸ್ ಬಂದ್ರು. ‘ಹೆಡ್ಡಾಫೀಸ್ನಲ್ಲಿ ಸೀಡಿ ಇಶ್ಯೂ ರೈಸ್ ಆಗಿದೆ. ಡಿಸ್ಕಷನ್‍ಗೆ ಬನ್ನಿ’ ಅಂದಾಗ, ಇವತ್ತು ನನ್ನ ಕೆಲ್ಸ ಹೋಯ್ತು ಅಂದ್ಕೊಂಡೆ.

ಮೀಟಿಂಗ್‍ನಲ್ಲಿ ಕುಳಿತಾಗ ಗೊತ್ತಾಯ್ತು, ಬಾಸ್ ಹೇಳ್ತಾ ಇದ್ದಿದ್ದು ಅವರ ಬಾಸ್ ಸಿ.ದೊಡ್ಡಣ್ಣನವರು ಪ್ರಾಜೆಕ್ಟ್ ಬಗ್ಗೆ ಕಮೆಂಟ್ ಮಾಡಿದ ವಿಷಯ ಅಂತ.

ಮನೆಗೆ ಬಂದೆ. ‘ಪಾಶ ಅನ್ನೋರು ಬಂದಿದ್ರು, ಸೀಡಿ ತಂದ್ಕೊಟ್ರು’ ಅಂದ್ಲು ಹೆಂಡ್ತಿ.

‘ಯಾವ ಸೀಡಿ?’ ಎಂದು ಗಾಬರಿಯಾದೆ. ಅವ್ಳು ನಗ್ತಾ, ‘ನಮ್ಮ ಮದ್ವೆ ಕ್ಯಾಸೆಟ್ ಡಿಜಿಟೈಸ್ ಮಾಡೋಕೇಂತ ಸ್ಟುಡಿಯೋಗೆ ಕೊಟ್ಟಿದ್ವಲ್ಲ ಅದು. ನನ್ನ ಫ್ರೆಂಡ್ಸ್ ಮುಂದೆ ಪೆಕರು ಪೆಕರಾಗಿ ನಿಂತಿದ್ರಿ ನೀವು’ ಅಂತ ಕುಟುಕಿದಳು. ಸೀಡಿ ಪಾಶದಿಂದ ಮುಕ್ತನಾದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT