ಬುಧವಾರ, ನವೆಂಬರ್ 20, 2019
21 °C

ಯಾರು ಕಾರಣ?

Published:
Updated:
Prajavani

ಬಹಳ ಅಪರೂಪಕ್ಕೆ ಮಡದಿ ಬೆಳ್ಳಂಬೆಳಿಗ್ಗೆ ನ್ಯೂಸ್ ಪೇಪರ್ ಹಿಡಿದು ಕೂತಿದ್ದಳು. ‘ಏನಪ್ಪಾ ಇವತ್ತು ವಿಶೇಷ? ಯಾವುದಾದ್ರು ಡಿಸ್ಕೌಂಟ್ ಸೇಲ್ ಹಾಕಿದಾರಾ?’ ಎಂದೆ ನಗುತ್ತ.

‘ಇಲ್ಲರಿ, ಒಂದು ನ್ಯೂಸ್ ನೋಡಿ ನಗು ಬಂತು. ‘ನನ್ನ ಮೇಲೇನಾದ್ರು ಐ.ಟಿ ದಾಳಿ ನಡೆದ್ರೆ ಅದಕ್ಕೆ ವಿರೋಧ ಪಕ್ಷದೋರೇ ಕಾರಣ’ ಅಂತ ಒಬ್ರು ಹೇಳಿದಾರೆ. ನೋಡಿ ಇಲ್ಲಿದೆ’ ಮಡದಿ ತೋರಿಸಿದಳು.

‘ಅಲೆ ಇವ್ನ, ಇದೆಂಗಾತು ಅಂದ್ರೆ, ಯಾರೋ ಕುಡಿದೋನು ನಾನೇನಾದ್ರು ರಸ್ತೇಲಿ ಎಡವಿ ಬಿದ್ರೆ ಅದಕ್ಕೆ ಮುನ್ಸಿಪಾಲ್ಟಿಯೋರೇ ಕಾರಣ ಅಂದಂಗಾತು...’

‘ಅಲ್ಲ, ಪ್ರವಾಹ ಬಂದು ಮನೆ ಮಠ ಕೊಚ್ಕೊಂಡು ಹೋಗೋಕೆ ಯಡ್ಯೂರಪ್ಪ ಕಾರಣ ಅಂದಂಗಾತು...’

‘ಅದೆಂಗೆ?’

‘ಯಡ್ಯೂರಪ್ಪ ಮುಖ್ಯಮಂತ್ರಿ ಆಗ್ತಿದ್ದಂಗೆ ಭಾರೀ ಮಳೆ ಸುರೀತು ಅಂತ ಅವರ ಪಾರ್ಟಿಯೋರೇ ಹೇಳಿಲ್ವ? ಅಂದಮೇಲೆ ಮಳೆ ಅನಾಹುತಕ್ಕೂ ಅವರೇ ಕಾರಣ ಆದಂಗಾತು’.

‘ನಿಂದೂ ಪಾಯಿಂಟು ಬಿಡು. ಇದಕ್ಕೆ ಇನ್ನೊಂದೆರಡು ಸೇರಿಸಬಹುದು. ಬಂಡೆ ಮತ್ತು ಪಂಚೆ ತಮಗೆ ಜಾಮೀನು ಸಿಗದಿರೋಕೆ ಮೀಡಿಯಾದವರೇ ಕಾರಣ ಅನ್ನಬಹುದಾ?’

‘ಅನ್ನಬಹುದು, ಈಗ ಅನರ್ಹರಾಗಿರೋರು ಒಂದು ವೇಳೆ ಅನಾಥರಾಗಿಬಿಟ್ರೆ ಯಾರು ಕಾರಣ ಅನ್ನಬಹುದು?’

‘ಗೊತ್ತಿಲ್ಲಪ್ಪ, ಅದೇ ತರ ಯಡ್ಯೂರಪ್ಪ ಭೇಟಿಗೆ ನಮೋ ಸಾಹೇಬ್ರು ಅವಕಾಶ ಕೊಡದಿರೋದಕ್ಕೆ ಯಾರು ಕಾರಣ ಅನ್ನಬಹುದು?’

‘ನಂಗೂ ಗೊತ್ತಿಲ್ಲ ಕಣ್ರಿ’ ಮಡದಿ ತಲೆ ಕೊಡವಿದಳು.

ಅಷ್ಟರಲ್ಲಿ ಮಗರಾಯ ‘ಪಪ್ಪಾ ನಾ ಸ್ಕೂಲ್‍ಗೆ ಹೋಗಿ ಬರ್ತೀನಿ. ಇವತ್ತು ಮಿಡ್ ಟರ್ಮ್ ಪರೀಕ್ಷೆ ರಿಸಲ್ಟು. ನಾನೇನಾದ್ರು ಫೇಲಾದ್ರೆ ಅದಕ್ಕೆ ನಮ್ ಟೀಚರ್‌ಗಳೇ ಕಾರಣ’ ಅಂದ.

‘ಅಲೆ ಇವ್ನ, ಅವರ‍್ಯಾಕೆ ಕಾರಣ ಆಗ್ತಾರೋ?’

‘ಪರೀಕ್ಷೇಲಿ ನಾನು ಬರೆಯೋದೆಲ್ಲ ಬರೆದಿದೀನಿ. ಅವರು ಮಾರ್ಕ್ಸ್‌ ಕೊಡದಿದ್ರೆ ನಾನೇನ್ ಮಾಡ್ಲಿ?’

‘ನಾನು ತುಟಿಪಿಟಕ್ಕೆನ್ನದೆ ಮಡದಿ ಮುಖ ನೋಡಿದೆ.

ಪ್ರತಿಕ್ರಿಯಿಸಿ (+)