ಗುರುವಾರ , ನವೆಂಬರ್ 26, 2020
21 °C

ಚುರುಮುರಿ: ಪಟಾಕಿ-ಚಟಾಕಿ

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

‘ಈ ಬಾರಿ ದೀಪಾವಳಿಗೆ ಏನಿದ್ದರೂ ಹಸಿರು ಪಟಾಕಿಗಳನ್ನೇ ಸಿಡಿಸಬೇಕು. ಲಕ್ಷ್ಮಿ ಪಟಾಕಿ, ಆಟಂ ಬಾಂಬ್ ಇಲ್ಲ’ ಪುಟ್ಟಿಯ ಅಳಲು.

‘ಅದೆಂಥದ್ದೇ ಹಸಿರು ಪಟಾಕಿ?’ ಅತ್ತೆ ಹುಬ್ಬೇರಿಸಿದರು.

‘ಪರಿಸರಸ್ನೇಹಿ ಪಟಾಕಿ, ಹೂಕುಂಡ, ಸುರ್ ಸುರ್ ಬತ್ತಿ, ಭೂಚಕ್ರ ಇಂಥದ್ದು. ಇವುಗಳನ್ನು ಉರಿಸುವಾಗ ಅಪಾಯ ಕಡಿಮೆ. ವಾಯುಮಾಲಿನ್ಯ, ಶಬ್ದಮಾಲಿನ್ಯವನ್ನೂ ಕಡಿಮೆ ಮಾಡುತ್ತೆ. ಕೊರೊನಾ ಭಯ ಇನ್ನೂ ಇದೆಯಲ್ಲ?’ ಎನ್ನುತ್ತಾ ಪುಟ್ಟಿಯತ್ತ ತಿರುಗಿ ‘ಇನ್ನೇನು ಐಪಿಎಲ್ ಕ್ರಿಕೆಟ್ ಕಪ್ ಕೈ ತಪ್ಪಿತು, ಕಾಲೇಜ್ ಶುರುವಾಗುತ್ತೆ ಅಂತ ಹೇಳ್ತಿದ್ದಾರೆ. ಪಟಾಕಿ ಗೊಡವೆ ಬಿಟ್ಟು ಪಾಠ, ಪ್ರವಚನದ ಕಡೆ ಗಮನ ಇರಲಿ’ ನನ್ನವಳ ಖಾರದ ಪ್ರತಿಕ್ರಿಯೆ.

‘ಒಳ್ಳೇದೇ ಆಯ್ತು, ಪಟಾಕಿ ಹೊಡೆಯೋ ಸಂಭ್ರಮದಲ್ಲಿ ಎಷ್ಟು ಜಾಗ್ರತೆಯಿದ್ದರೂ ಅನಾಹುತ ಮಾಡ್ಕೊಳ್ತಾವೆ ಮಕ್ಕಳು. ಈಗಿನ ಕಷ್ಟಕಾಲದಲ್ಲಿ ಪಟಾಕಿ ಖರೀದಿ ನೆಪದಲ್ಲಿ ದುಡ್ಡು ಯಾಕೆ ದಂಡ ಮಾಡಬೇಕು? ನಾಳೆ ನಮಗೇ ಯಾವುದಕ್ಕಾದರೂ ಉಪಯೋಗಕ್ಕೆ ಉಳಿಸಿಕೊಳ್ಳೋದು ಜಾಣತನ... ಅದೂ ಅಲ್ದೆ, ಇನ್ನೆಷ್ಟು ದಿನ ಕೊರೊನಾ ಕಾಡುತ್ತೆ? ನಮ್ಮ ಗೊರವಯ್ಯನ ಶುಭವಾಣೀನೂ ಅದೇ ಅಲ್ವೆ? ವ್ಯಾಧಿ ಬೂದಿ ಆಗುತ್ತೆ, ಸೃಷ್ಟಿ ಸಿರಿ ಆಗುತ್ತೆ, ಎಲ್ಲದಕ್ಕೂ ತಾಳ್ಮೆಯಿಂದ, ಜಾಗರೂಕತೆಯಿಂದ ಕಾಯಬೇಕು, ಲಸಿಕೇನೂ ರೆಡಿ ಆಗ್ತಿದೆ, ಮುಖಕ್ಕೆ ಮಾಸ್ಕ್, ಅಂತರ ಮರೀಬಾರ್ದು ಅಷ್ಟೇ’ ಅತ್ತೆ ಕಿವಿ ಹಿಂಡಿದರು.

‘ಪೇಪರ್ ಓದೋಕ್ಕೆ ಕಿಟಕಿ ಹತ್ತಿರ ಕೂತ್ಕೊಳ್ಳಿ. ಸ್ವಿಚ್ ಹಾಕಿದ್ರೆ ಶಾಕ್ ಹೊಡಿಯೋ ಹಾಗಿದೆ, ಕರೆಂಟ್ ಬೆಲೆ ಜಾಸ್ತಿ ಆಗಿರೋದು ಗೊತ್ತಿಲ್ವಾ?’ ನನ್ನವಳು ಬಿಸಿ ಕಾಫಿ ತಂದಿಟ್ಟು ಭುಸುಗುಟ್ಟಿದಳು.

‘ಅಮೆರಿಕದಲ್ಲಿ ಹೊಸ ಹವಾ, ವಿಶೇಷ ಅಂದರೆ, ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಮಹಿಳೆ...’ ವಿಷಯಾಂತರಿಸಿದೆ.

‘ಹೌದ್ರೀ, ಹೆಸರು ಕಮಲಾ’ ಮುಖವರಳಿಸಿದಳು.

‘ಇಲ್ಲೂ ಕಮಲವೇ ಅರಳಿದೆ’ ಮಿನಿ ಚುನಾವಣಾ ಸಮರದತ್ತ ಗಮನ ಸೆಳೆದೆ.

‘ಏನಾದರಾಗಲಿ, ಜನಸಾಮಾನ್ಯನ ಮುಖ ಬಾಡದಿರಲಿ’ ಚಟಾಕಿ ಸಿಡಿಸಿದರು ಅತ್ತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು