ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಲ್ಯಾಣ ಡ್ಯಾಶ್‌ಬೋರ್ಡ್

Last Updated 29 ಜನವರಿ 2023, 19:30 IST
ಅಕ್ಷರ ಗಾತ್ರ

ಬೆಕ್ಕಣ್ಣನಿಗೆ ಕಳೆದ ವಾರ ‘ಬಾರಲೇ ಚುರುಮುರಿ ಮಾಡೂಣು’ ಎಂದರೆ ‘ಚುರುಮುರಿ ಗಿರುಮುರಿಗೆಲ್ಲ ನನಗ ಟೈಮಿಲ್ಲ’ ಎಂದು ಮುಖ ತಿರುವಿತ್ತು. ವಾರವಿಡೀ ಲ್ಯಾಪ್‌ಟಾಪಿನಲ್ಲಿ ತಲೆ ಹುದುಗಿಸಿ ಏನೋ ಕೆಲಸ ಮಾಡುತ್ತಲೇ ಇತ್ತು. ನಾನು ಕುತೂಹಲ ತಡೆಯದೇ ಇಣುಕಿದೆ.

‘ಚುನಾವಣೆ ಹತ್ತಿರ ಬರಾಕೆ ಹತೈತಿ. ಕುಮಾರಣ್ಣನ ಮನಿಯವರು ಟಿಕೀಟು ನನಗ, ನಿನಗ ಅಂತ ಕಿತ್ತಾಟದಾಗೆ ಮುಳುಗ್ಯಾರೆ. ಕೈಪಕ್ಷದೋರು ಕೆಸರು ಎರಚಾಟದಲ್ಲಿ ತಾವೇನು ಮಾಡಬಕು ಅನ್ನೂದೇ ಮರತಾರ. ಆದರ ನಮ್ ಕಮಲಕ್ಕನ ಮನಿಯೋರು ಈಗಾಗ್ಲೇ ಐಟಿ ಮಂದಿ ಪಡೆ ಸಿದ್ಧ ಮಾಡ್ಯಾರ. ಆ ಪಟ್ಟಿವಳಗ ನಂದೂ ಹೆಸರೈತಿ’ ಎಂದು ಹೆಮ್ಮೆಯಿಂದ ಬೀಗಿತು. ನಾನು ತಲೆ ಕೆರೆದುಕೊಂಡೆ.

‘ಕಲ್ಯಾಣ ಕರ್ನಾಟಕಕ್ಕೆ 5,700 ಕೋಟಿ, ಮತ್ತೆ ಹೆಚ್ಚುವರಿ 1,500 ಕೋಟಿ, ನೇಕಾರರ ಕಲ್ಯಾಣಕ್ಕೆ 51.49 ಕೋಟಿ ಪ್ಲಸ್ 23.41 ಕೋಟಿ, ಎಸ್‌ಸಿ– ಎಸ್‌ಟಿ ಕಲ್ಯಾಣಕ್ಕೆ 990 ಕೋಟಿ... ಎಲ್ಲಾನೂ ಕೂಡಿಸಿ ಎಷ್ಟ್ ಕೋಟಿ ರೂಪಾಯಿ ಅಂತ ಹೇಳು ನೋಡೂಣು’. ನಾನು ಎಣಿಸಲಿಕ್ಕೆ ಕ್ಯಾಲ್ಕ್ಯುಲೇಟರ್ ಹುಡುಕಿದೆ.

‘ನಮ್ಮ ಬೊಮ್ಮಾಯಿ ಅಂಕಲ್ಲು ಮತ್ತವರ ಮಂತ್ರಿಮಂಡಲದೋರು ಸೇರಿ, ಬ್ಯಾರೆಬ್ಯಾರೆ ಕಲ್ಯಾಣ ಕಾರ್ಯಕ್ರಮಕ್ಕೆ ಕೋಟಿಗಟ್ಟಲೆ ರೊಕ್ಕ ಕೊಟ್ಟಾರಲ್ಲ... ಅವನ್ನೆಲ್ಲ ಫಟಾಫಟ್ ಲೆಕ್ಕ ಮಾಡಿ ಹೇಳಾಕೆ ಒಂದು ಕಲ್ಯಾಣ ಡ್ಯಾಶ್‌ಬೋರ್ಡ್ ತಯಾರು ಮಾಡೀನಿ. ಹಿಂಗ ಒಂದು ಕಲ್ಯಾಣ ಕಾರ್ಯಕ್ರಮದ ಹೆಸರಿನ ಮ್ಯಾಗೆ ಕ್ಲಿಕ್ ಮಾಡಿದ್ರ ಸಾಕು, ಅದನ್ನ ನಮ್ ಬೊಮ್ಮಾಯಿ ಅಂಕಲ್ಲು ಯಾವಾಗ ಶುರು ಮಾಡಿರು, ಎಷ್ಟ್ ಮಂದಿಗೆ ಎಷ್ಟ್ ರೊಕ್ಕ ಕೊಟ್ಟಾರೆ ಇತ್ಯಾದಿ ವಿವರ ತೋರಿಸೂ ಡ್ಯಾಶ್‌ಬೋರ್ಡ್ ಇದು’ ಬೆಕ್ಕಣ್ಣ ವಿವರಿಸಿತು.

‘ಅಂದ್ರ ಇಲ್ಲಿ ನಿನ್ನ ಡ್ಯಾಶ್‌ಬೋರ್ಡ್ ಕ್ಲಿಕ್ ಮಾಡಿದ್ರ ಸಾಕು, ಅಲ್ಲಿ ಕೆಲಸ ಆಗಿ, ಪ್ರಗತಿನೂ ಆಗಿಬಿಡತೈತೇನು’.

‘ಕೆಲಸದ ಪ್ರಗತಿ ಯಾರಿಗೆ ಬೇಕಾಗೈತಿ? ಡ್ಯಾಶ್‌ಬೋರ್ಡ್ ಅಂಕಿಸಂಖ್ಯೆನೇ ನಮ್ಮ ಪ್ರಗತಿ’ ಎನ್ನುತ್ತ ಮೀಸೆ ತಿರುವಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT