ಶುಕ್ರವಾರ, ಜುಲೈ 30, 2021
25 °C

ಚುರುಮುರಿ | ಬಂಡಾಯದ ಬಾವುಟ

ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

ಮನೆಮಕ್ಕಳು ಯಜಮಾನನ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರಿಂದ ಗೃಹಕಲಹ ತಾರಕಕ್ಕೇರಿತ್ತು. ಮನೆಯೊಂದು ಮೂರು ಬಾಗಿಲು ಆಗುವ ಹಂತ ತಲುಪಿತ್ತು. ಮೂವರು ಗಂಡು ಮಕ್ಕಳು ಎಡ-ಬಲ-ಮಧ್ಯಮ ಎಂದು ಮೂರು ಗುಂಪುಗಳಾಗಿ ಕಚ್ಚಾಡುತ್ತಿ ದ್ದರು. ಇವರಿಗೆ ಹೆಣ್ಣು ಕೊಟ್ಟ ಬೀಗರು ಈ ಹಿಂದೆ ಬಹಳಷ್ಟು ಬಾರಿ ರಾಜಿ ಪಂಚಾಯಿತಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ‌‌. ಕೊನೆಯ ಪ್ರಯತ್ನ ಮಾಡಲು ಮಧ್ಯಮನ ಮಾವ ಬಂದಿದ್ದರು.

‘ಅವರು ಬೇಡ, ತಮ್ಮ ಅಳಿಯನ ಪರ ವಹಿಸ್ತಾರೆ. ನಮ್ಮ ಮಾವ ಬರಲಿ’ ಎಂದ ಮೊದಲ ಮಗ. ಮೂರನೇ ಮಗನೂ ಅದೇ ರಾಗ ಎಳೆದ.

‘ನಿಮ್ಮ ಮಾವಂದಿರು ನಿಮ್ಮ ಪರ ವಹಿಸುವುದಿಲ್ವೇ?’ ಎಂದು ಅಪ್ಪ ಗದರಿಸಿದಾಗ ಸುಮ್ಮನಾದರು.

ಮಾವ ಕೇಳಿದರು, ‘ನಿಮ್ಮ ಸಮಸ್ಯೆ ಏನ್ರಯ್ಯಾ?’

‘ಅದೇ ಹಳೇ ಸಮಸ್ಯೆ. ಅಪ್ಪ ಪಕ್ಷಪಾತ ಮಾಡ್ತಾರೆ. ಅವರ ಹೆಸರಲ್ಲಿ ಎಲ್ಲ ಅಧಿಕಾರ ವನ್ನೂ ಮಧ್ಯದ ಮಗ ಚಲಾಯಿಸ್ತಾನೆ. ನಮಗೆ ಯಾವ ಅಧಿಕಾರಾನೂ ಇಲ್ಲ. ನಮ್ಮ ಮಕ್ಕಳಿಗೆ ಬಿಸ್ಕತ್ ಕೊಡಿಸೋಕೂ ನಮಗೆ ಆಗ್ತಿಲ್ಲ’.

‘ಇದೆಲ್ಲಾ ಸುಳ್ಳು, ಆಗದವರ ಚಿತಾವಣೆ. ಬೇಕಾದ್ರೆ ಈಗಲೇ ಯಜಮಾನಿಕೆ ಬಿಡಲು ನಾನು ಸಿದ್ಧ’.

‘ಹೀಗೆ ಹೇಳ್ತಾನೇ ಮುದುಕರಾದ್ರಿ’.

ಮಾವ ಹೇಳಿದರು- ‘ನಾನಿಲ್ಲಿ ಮಧ್ಯಸ್ಥನಾಗಿ ಬಂದಿರೋದು ಯಜಮಾನಿಕೆ ಬದಲಾಯಿ
ಸೋಕಲ್ಲ. ನಿಮ್ಮ ಭಿನ್ನಾಭಿಪ್ರಾಯ ಬಗೆ ಹರಿಸೋಕೆ. ನಮ್ಮ ನಿಮ್ಮದು ಸಂಪ್ರದಾಯಸ್ಥ, ಶಿಸ್ತಿಗೆ ಹೆಸರಾದ ದೊಡ್ಡ ಮನೆತನ. ಈಚೆಗೆ ನಮ್ಗೆ ವಿರೋಧಿಗಳು ಹೆಚ್ಚಾಗಿದ್ದಾರೆ... ಅಲ್ದೆ ಈ ಕೊರೊನಾ, ಫಂಗ‌ಸ್‌ಗಳ ಆರ್ಭಟ ಇನ್ನೂ ತಣ್ಣಗಾಗ್ತಿಲ್ಲ. ಇವೆಲ್ಲಾ ಮುಗಿಯೋವರೆಗೆ ಹೊಂದಿಕೊಂಡಿರಿ’.

‘ಹಾಗಾದ್ರೆ ನಮ್ಗೆ ಯಜಮಾನಿಕೆ ಈ ಜನ್ಮದಲ್ಲಿ ‌‌‌ಸಿಕ್ಕಂತೆಯೇ’ ಎಂದು ಬಂಡುಕೋರ ಮಕ್ಕಳು ತಲೆಮೇಲೆ ಕೈಹೊತ್ತರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.