ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಪಿಎಲ್ ಕಪ್

Last Updated 15 ಜುಲೈ 2019, 20:00 IST
ಅಕ್ಷರ ಗಾತ್ರ

‘ಬೈತಿರಣ್ಣ ಓಡೋಗದು ನೋಡ್ಲಾ!’ ಅಂದರು ತುರೇಮಣೆ. ‘ಸಾರ್, ಸ್ವಾಮಿಗಳು ಹೇಳವುರೆ ಓಡೋಗೋರ್ ಕಾಲು ಮುರೀರಿ ಅಂತ. ಓಡೋಗೋರು ಭಾಳಾ ಜಾಸ್ತಿ ಆಗವರೆ ಸಾರ್?’ ಅಂದೆ.

‘ಲೋ ಕೈನೂ ಮುರೀರಿ ಅಂತ ಹೇಳವ್ರೆ ಸ್ವಾಮಿಗಳು! ಕೈಪಿಎಲ್ ಪವರ್ ಕಪ್ ಮ್ಯಾಚ್ ಶುರುವಾಗದಲ್ಲೋ. ಮೂರು ಕ್ಲಬ್ಬುಗಳ ಎರಡು ಟೀಮವೆ! ಮೈತ್ರಿ ಟೀಮಿನ ಹದಿನೈದು ಜನ ರೆಬೆಲ್ಲಾಗಿ ‘ನಾವು ಕಮಲದ ಟೀಮಿಗೆ ಬಿಲ್ಕುಲ್ ಹೋಗದೇಯ’ ಅಂತ ಕಡ್ಡಿ ಮುರುದವ್ರೆ’ ಅಂದ್ರು ತುರೇಮಣೆ.

‘ಅದ್ಯಾಕೆ ಸಾರ್?’ ಅಂತ ಕೇಳಿದೆ.

‘ನೋಡ್ಲಾ, ಎಂಟಿ-ಎಸ್ಟಿ ಹೇಳತಿದ್ರು ವೈಸ್‍ಕ್ಯಾಪ್ಟನ್ ವೇರಣ್ಣನ ಕಾಟ ಜಾಸ್ತಿಯಾಗ ದಂತೆ! ಅಭಿಮಾನಿಗಳೇ ಇದೆಲ್ಲಾ ನಿಮಗೋಸ್ಕರ ಅಂತ ರೆಬೆಲ್ಲುಗಳು ಅಳುತ್ಲೇ ಇದ್ರು’ ಅಂದ್ರು.

‘ಸಾರ್ ತೆನೆ ಕ್ಲಬ್ಬಿನ ಕಥೆ ಹೆಂಗೆ?’ ಅಂದೆ.

‘ಬಾಡಿಗೆ ಪ್ಲೇಯರುಗಳನ್ನು ತಂದು ಕಪ್ ಗೆದ್ದಿದ್ದು ಅಂದ್ರೆ ಇವರೇ! ಮಧ್ಯಾಹ್ನದ ಬಿಸಿ ಊಟ ಎಲ್ಲಾ ಅವರೇ ತಿಂದುಬುಡ್ತರೆ ಅಂತ ಇವರ ಪ್ಲೇಯರುಗಳೇ ರೆಬೆಲ್ಲುಗಳಾಗವ್ರೆ. ಆದ್ರೂ ಕುಮಾರಣ್ಣ ನಾವು ಮ್ಯಾಚ್ ಆಡೇ ಆಡ್ತೀವಿ ಅಂತಾವ್ರೆ!’ ಅಂದ್ರು ತುರೇಮಣೆ.

‘ಕಾಂಗೈ ಕ್ಲಬ್ಬು ಏನು ಮಾಡತಾದೆ ಸಾರ್?’ ಅಂತ ಕೇಳಿದೆ.

‘ಯಪ್ಪಾ! ಈ ಹಳೇ ಕ್ಲಬ್ಬಿನ ಪ್ಲೇಯರುಗಳು ಕ್ಯಾಪ್ಟನ್ ಮಾತೇ ಕೇಳಲ್ಲ! ಮೈತ್ರಿ ಟೀಮಲ್ಲಿ ನಾವು ಟ್ವೆಲ್ತ್ ಮ್ಯಾನುಗಳಾಗಲ್ಲ ಅಂತ ರೆಡ್ಡಿ ಮಾಮ, ಹಸಿದೋರ ಹೊಟ್ಟೆಮ್ಯಾಲೆ ಹೊಡಿಬ್ಯಾಡಿ ಅಂತ ಆಟಗಾರರು ಟೀಮು ಬುಟ್ಟೊಯ್ತಾವರೆ’ ಅಂತ ಕ್ಲಾರಿಫಿಕೇಶನ್ ಕೊಟ್ರು.

‘ಇನ್ನು ಕಮಲಾ ಕ್ಲಬ್ಬು ಏನು ಮಾಡ್ತಾ ಅದೆ?’ ಅಂತ ವಿಚಾರಿಸಿದೆ.

‘ಈ ಕ್ಲಬ್ಬಿಗೆ ಪ್ಲೇಯರುಗಳೇ ಸಿಕ್ತಾ ಇಲ್ಲ ಪಾಪ! ರೆಬೆಲ್ ಪ್ಲೇಯರುಗಳನ್ನ ಸಿಕ್ಕಾಪಟ್ಟೆ ಹುಣಿಸೆಬೀಜ ಕೊಟ್ಟು ಖರೀದಿ ಮಾಡವುರಂತೆ. ಕೆಟ್ಟ ಕಣ್ಣು ಬೀಳಬಾರದು ಅಂತ ಅವರನ್ನೆಲ್ಲ ಚಂದ್ರಲೋಕಕ್ಕೆ ಕಳಿಸ್ತಿದೀವಿ ಅಂತ ಕ್ಯಾಪ್ಟನ್ ಧವಳಪ್ಪ ಇವತ್ತೇನೋ ನಗಾಡತಿದ್ರು!’ ಅಂತ ತುರೇಮಣೆ ಅಂದ್ರು. ಆದರೆ ಕೈಪಿಎಲ್ ಕಪ್ ಆಡ್ತಾ ಇರೋದ್ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT