ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮ್ಮೆ ಮತ್ತು ಎಮ್ಮೆಲ್ಲೆ!

Last Updated 18 ಜುಲೈ 2019, 19:45 IST
ಅಕ್ಷರ ಗಾತ್ರ

‘ರೀ ತೆಪರೇಸಿ, ಎಮ್ಮೆ ಮತ್ತು ಎಮ್ಮೆಲ್ಲೆಗೆ ಏನ್ರೀ ವ್ಯತ್ಯಾಸ?’ ಸಂಪಾದಕರು ಪ್ರಶ್ನಿಸಿದರು.

‘ಸರ್, ಎಮ್ಮೆ ನಿಂತಲ್ಲೆ ಮೇಯುತ್ತೆ, ಎಮ್ಮೆಲ್ಲೆ ಊರೂರು ತಿರುಗಿ ಮೇಯ್ತಾರೆ. ಅಷ್ಟೆ ವ್ಯತ್ಯಾಸ’.

‘ರೀ ಇದು ಬೀಚಿ ಹೇಳಿದ್ದು. ನಿಮ್ಮದು ಒರಿಜಿನಲ್ ಏನಾದ್ರೂ ಇದ್ರೆ ಹೇಳಿ’.

‘ಸರ್, ಹಿಂದೆಲ್ಲ ಎಮ್ಮೆಗಳನ್ನ ಕಟ್ಟಿ ಹಾಕ್ತಿದ್ರು. ಈಗ ಎಮ್ಮೆಲ್ಲೆಗಳನ್ನ ಕಟ್ಟಿ ಹಾಕ್ತಿದಾರೆ, ಸರಿನಾ?’

‘ಇದನ್ನೂ ಎಲ್ಲೋ ಕೇಳಿದೀನಿ. ಬೇರೆ ಏನಾದ್ರೂ ಹೊಸದು ಇದ್ರೆ ಹೇಳ್ರಿ...’

‘ಸರ್, ಎಮ್ಮೆ ಎಲ್ಲೇ ಇದ್ರು ಕತ್ತಲಾಗ್ತಿದ್ದಂಗೆ ಸೀದಾ ತನ್ನ ಮಾಲೀಕನ ಮನೆಗೆ ಬರುತ್ತೆ. ಆದ್ರೆ ಎಮ್ಮೆಲ್ಲೆಗಳು ಕತ್ತಲಾಗ್ತಿದ್ದಂಗೆ ಮನೆಯಲ್ಲ, ಪಕ್ಕದ ಮನೆಯಲ್ಲ, ಕುರ್ಚಿಗಾಗಿ ಊರನ್ನೇ ಬಿಟ್ಟು ರೆಸಾರ್ಟ್ ಸೇರ್ಕಂತಾರೆ, ಹೆಂಗೆ?’

‘ಇದು ಓಕೆ, ಅಷ್ಟೇನಾ?’

‘ಸರ್, ಎಮ್ಮೆ ಕರ‍್ರಗಿದ್ರೂ ಬಿಳಿ ಹಾಲು ಕೊಡುತ್ತೆ. ಎಷ್ಟು ಹುಲ್ಲು ಹಾಕ್ತೀವಿ ಅಷ್ಟು ಸಗಣಿ ಹಾಕುತ್ತೆ. ಕೊಟ್ಟಿಗೇಲಿ ಕಟ್ಟಿ ಹಾಕಿದ್ರೂ ತೆಪ್ಪಗಿರುತ್ತೆ. ಈ ಎಮ್ಮೆಲ್ಲೆಗಳ ತರ ಹಾಲು ಕುಡಿದು ಕೋಲಾಹಲ ಎಬ್ಬಿಸಲ್ಲ. ರೆಸಾರ್ಟೇ ಬೇಕು ಅಂತ ಹಟ ಹಿಡಿಯಲ್ಲ’.

‘ಗುಡ್, ಮತ್ತೆ?’

‘ಎಮ್ಮೆಗಳಲ್ಲಿ ತೃಪ್ತರು, ಅತೃಪ್ತರು ಅಂತ ಇರಲ್ಲ ಸಾ...’

‘ಕರೆಕ್ಟ್, ಮತ್ತೆ...?’

‘ಎಮ್ಮೆ ಕಟ್ಟಿರೋರಿಗೆ ಅದು ಕರು ಹಾಕುತ್ತೆ, ಹಾಲು ಕೊಡುತ್ತೆ ಅನ್ನೋ ವಿಶ್ವಾಸ ಇದ್ದೇ ಇರುತ್ತೆ. ಆದ್ರೆ ಎಮ್ಮೆಲ್ಲೆಗಳನ್ನ ಕಟ್ಟಿರೋರಿಗೆ ಅವರು ತಮ್ಮ ಪರ ಮತಹಾಕ್ತಾರೆ ಅನ್ನೋ ವಿಶ್ವಾಸ ಖಂಡಿತ ಇರಲ್ಲ ಸಾ’.

‘ವಂಡರ್‍ಫುಲ್, ನಿಂಗೂ ತಲೆ ಇದೆ ಕಣಯ್ಯ’ ಎನ್ನುತ್ತ ತೆಪರೇಸಿಯ ಡುಬ್ಬ ಚಪ್ಪರಿಸಿದರು ಸಂಪಾದಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT