ಬುಧವಾರ, ಆಗಸ್ಟ್ 21, 2019
28 °C

ಶಾಸಕ ಎಲ್ಲಿದ್ದೀಯಪ್ಪಾ?

Published:
Updated:
Prajavani

‘ಹೊಸಾ ಸಿ.ಎಂ ಒಬ್ಬರೇ ಅನಾಥರ ಥರಾ ಸುತ್ತು ತಾವರಲ್ಲಾ ಸಾರ್ ಪಾಪ! ಒಬ್ಬ ಶಾಸಕನೂ ಜೊತೆಗಿಲ್ಲ! ಡೆಲ್ಲಿ ಮಾವಗೋಳು ಇನ್ನಿಲ್ಲದಂಗೆ ಹೇಳಿದ್ರು. ಒಂದೆರಡು ದಿನ ಸುಮ್ಮಗಿರಿ ಅಂತ, ಕೇಳಲಿಲ್ಲ’ ಅಂದೆ.

‘ಹ್ಞೂಂ ಕಣಪ್ಪಾ, ಐನಾತಿ ಶಾಸಕರುಗಳು ಟಿ.ವಿಯಲ್ಲಿ ಮಕ ಕಾಣಂಗಿದ್ದರೆ ಮಾತ್ರ ಹಿಂದು ಗಡೆ ಬ್ಯಾತಾಳನ ಥರಾ ನಿಂತಿರತಾರೆ’ ಅಂದ್ರು ತುರೇಮಣೆ.

‘ಅಲ್ಲಾ ಸಾರ್, ಪ್ರವಾಹದ ಪರಿಸ್ಥಿತಿ ಗಂಭೀರವಾಗದೆ, ಎಲ್ಲಾ ಶಾಸಕರೂ ನಿಮ್ಮನಿಮ್ಮ ಕ್ಷೇತ್ರಕ್ಕೆ ಹೋಗಿ ಅಂತ ಯೆಡುರಪ್ಪಾರು ಆಡ್ರು ಕೊಟ್ರೂ ಯಾರನ್ನೂ ಕಾಣೆ. ಸೋತೋರು ಪತ್ತೇನೇ ಇಲ್ಲ’ ಅಂದೆ.

‘ಅವೆಲ್ಲಿದ್ದಾವೋ! ಚಳಿಗೆ ಎಣ್ಣೆ ಹಾಕಿ ಕಂಬಳಿ ಹೊಚ್ಚಿಕೊಂಡು ಮಲಗವೆ. ಮಂತ್ರಿ ಮಾಡದೇ ಇದ್ರೆ ಮುನಿಸಿಗ್ಯಂಡು ರೆಸಾರ್ಟು ಸೇರಿಕೊಳ್ತವೆ. ಮೊನ್ನೆ ಹೊನ್ನಾಳಿ ಚಿಗಪ್ಪ ಮಾತ್ರಾ ಮೂರಡಿ ನೀರಲ್ಲಿ ಕಷ್ಟಪಟ್ಟು ತೆಪ್ಪಕ್ಕೆ ಹುಟ್ಟು ಹಾಕ್ತಾ
ಇದ್ದದ್ದು ನೋಡಿದೆ’ ಅಂತ ಅಂದ್ರು.

‘ಪ್ರವಾಹದಲ್ಲಿ ಸೈನಿಕರು, ಅಗ್ನಿಶಾಮಕ ದಳದೋರು, ಪೊಲೀಸಿನೋರು, ಅಲ್ಲಿನ ಯುವಕರು ಪ್ರಾಣದ ಹಂಗಿಲ್ಲದೇ ಹೋರಾಡತಾವರೆ. ಅತೃಪ್ತರ ಕ್ಷೇತ್ರಗಳೆಲ್ಲಾ ಕೊಚ್ಚಿ ಹೋಗವೆ. ಯೆಲ್ಲಾಪುರದೋರು ಎಲ್ಲೋದ್ರೋ, ಬೆಳಗಾವಿ ಸಾವ್ಕಾರ‍್ರು ನಾಪತ್ತೆ. ಕೌರವ ಮಾಮಾ ಕಾಣೆಯಾಗಯ್ತೆ, ಚಿಕ್ಕಮಗಳೂರು ಮುಳುಗದೆ’ ಅಂದೆ.

‘ಸೆಂಟ್ರಲ್ ಫಂಡು ಬರೋತ್ಗೆ ಸರಿಯಾಗಿ ಹಂಚಿಕೆ ಮಾಡಕೆ ಎಲ್ಲಾರು ಬರತರೆ ಬುಡ್ಲಾ’ ಅಂದ್ರು ತುರೇಮಣೆ.

‘ಅಲ್ಲಾ ಸಾರ್, ಕಾಂಗ್ರೇಸಿನವು ಪ್ರವಾಹ ಕಾರ್ಯದಲ್ಲಿ ಕೈಜೋಡಿಸೋ ಬದ್ಲು ಪರಿಹಾರ ಕಾರ್ಯ ಅಧ್ಯಯನಕೆ ಹೊಂಟವಂತೆ. ಇಷ್ಟು ಹದಗೆಟ್ಟೋಗವಲ್ಲಾ ಸಾರ್ ಇವು! ಇವುಕ್ಕೆಲ್ಲಾ ಬುದ್ಧಿ ಯಾವಾಗ ಬಂದದು?’ ಅಂತ ಕೇಳಿದೆ.

‘ರಾಜಕೀಯದಲ್ಲಿ ಬುದ್ಧಿವಂತರು ಎಲ್ಲಿರ ತರೋ! ಮುಂದ್ಲ ಸಾರಿ ವೋಟು ಕೇಳಕ್ಕೆ ಬಂದಾಗ ‘ನಮಗೆ ಕಷ್ಟ ಬಂದಾಗ ಎಲ್ಲಿದ್ದೆಯಪ್ಪಾ ನೀನು’ ಅಂತ ಕೇಳಿ ಮೂರು ಸಾರಿ ನೀರಲ್ಲಿ ಮುಳುಗಿಸಿ, ಎರಡು ಸಾರಿ ತೆಗೀಬೇಕು ಕಣ್ಲಾ! ಕಾಣದಾ ಶಾಸ್ಕನಿಗೇ ಉಗೀತಿದೇ ಜನಾ’ ಅಂತ ಜಿಎಸ್‍ಎಸ್ ಪದ್ಯವ ಬದಲಾಯಿಸಿ ಹಾಡಿದ್ರು ತುರೇಮಣೆ.

Post Comments (+)