ಸೋಮವಾರ, ಡಿಸೆಂಬರ್ 9, 2019
17 °C

ಕುರಿಕ್ಷೇತ್ರದ ವಿಶ್ವರೂಪ

Published:
Updated:
Prajavani

‘ಬೆಂಗಳೂರು ಪಾಲಿಕೆ ಕಥೆ ಮಹಾಭಾರತದ ಥರಾ ಸೀರಿಯಲ್ ಬಂದಂಗೆ ಬತ್ತಾ ಅದಲ್ಲಾ ಸಾರ್?’ ಅಂದೆ.

‘ಬ್ರಹ್ಮಾಂಡ ಭ್ರಷ್ಟಾಚಾರದ ಮಹಾನಗರಪಾಲಿಕೆ ಪ್ರಸಿದ್ಧಿ ಈಗ ಮೆಕ್ಸಿಕೋಗಂಟಾ ಹರಡದೆ ಕಣಾ ಕೇಳು ಜನಮೇಜಯ!’ ಅಂದರು.

‘ಅದುಕ್ಕೇ ಬ್ಯಾರೆಬ್ಯಾರೆ ದೇಶಗಳಿಂದ ಬಂದು ಪಾಲಿಕೆ ಆಡಳಿತ ನೋಡಕೋಯ್ತರೇನೋ?’ ಅಂದೆ. ‘ನೋಡುಡಾ ಅವರು ಬರದು ತಮ್ಮ ಪಾಲಿಕೆಗಳು ಹೆಂಗಿರಬಾರದು ಅನ್ನೋದನ್ನ ತಿಳಕಳಕ್ಕೆ! ಕಲಿತ್ಕಂಡೋಗಕ್ಕೆ ಬಂದವ್ರೆ ಅನ್ನದೇ ಇನ್ನೇನು ಹೇಳಾರು ನಿಮ್ಮಂತ ಮಂಗನನ್ನ ಮಕ್ಕಳಿಗೆ?’ ಅಂದರು ತುರೇಮಣೆ. ‘ಹಂಗಾದ್ರೆ ಮುಂದ?’ ಅಂತ ಕೇಳಿದೆ.

‘ಇಲ್ಲಿ ಮರಾಮತ್ ಇಲಾಖೆಯ ಅಧಿಕಾರಿಗಳು ಅಂಬೋ ಅಂದಾಜುಗಂಡುಗಳು ತುರ್ತು ಕಾಮಗಾರಿಗಳ ದರಪಟ್ಟಿಯ ಪ್ರಾರಬ್ಧಮನಿದರ್ಪಣಂ ಚೆನ್ನಾಗಿ ನಡೆಸವರಂತೆ ಕಣೋ’ ಅಂದ್ರು ತುರೇಮಣೆ. ‘ಪಾಲಿಕೆಗೆ ಬೆಂಗಳೂರು ಕುರಿಕ್ಷೇತ್ರದ ಕುರಿಗಳ ಗೋಮಾಳೆ ಕುಯ್ದು ಗುಡ್ಡೆಬಾಡು, ಬೋಟಿ-ಕಲೇಜಾ ಪಾಲಾಕದೇ ಕೆಲಸ ಅನ್ನಿ?’ ಅಂದೆ.

‘ಪಾಲು ಇಕ್ಕೆ ಅನ್ನೋದು ಲೋಪಸಂಧಿ ಯಾಗಿ ಪಾಲಿಕೆ ಅಂತಾಗದೆ ಬಡ್ಡೆತ್ತದೇ! ಇಲ್ಲಿ ಆದೇಶಸಂಧಿ ನಡೆಯದಿಲ್ಲ, ಗುಣಸಂಧಿ ಕೇಳಂಗೇ ಇಲ್ಲ. ಪಾಲುಗಾರರು ಮತ್ತೆ ಬಿಲ್ಲು ಗಾರರು ಬಹಳ ಇರೋದ್ರಿಂದ ಒಂದೇ ಬಾರಿಗೆ ಎರಡೆರಡು ಬಿಲ್ಲು ಆಗಮಸಂಧಿ, ಕಸದ ಸವರ್ಣ ದೀರ್ಘಸಂಧಿ, ರಾಜಕಾಲುವೆ ರಗಳೆ! ಅಕ್ರಮಗಳ ತತ್ಸಮ- ತದ್ಭವಗಳ ಸಂಧಿಕಾರ್ಯ ನೋಡಿದ ನ್ಯಾಯಮೂರ್ತಿಗಳ ಸಮಿತಿಯ ವರದಿ ಮೂರ್ಛೆ ಹೋಗಿ ಅಟ್ಟ ಸೇರಿಕ್ಯಂಡದೆ. ಅಧಿಕಾರಿಗಳ ವ್ಯಾಕರಣ ನೋಡಿದ ಕೋರ್ಟು ಉಗಿದು ಸಾಕಾಗಿ ಸುಮ್ಮಗಾಯ್ತು!’ ಅಂತ ಉಸುರು ಬುಟ್ಟರು. ‘ಸಾರ್ ನಮ್ಮ ಬೃಹತ್ ಪಾಲಿಕೆಗಳಿಗೆ ಎಸಿಬಿ, ಲೋಕಾಯುಕ್ತ ಏನೂ ಮಾಡಕ್ಕಾಗಲ್ಲವಾ’ ಅಂತ ಅರ್ಜುನನಂತೆ ಕೇಳಿದೆ.

‘ಅಪ್ಪಾ ಅಲ್ಲೇನಿದ್ರೂ ಸಿಬಿಐ, ಸ್ಕಾಟ್‌ಲ್ಯಾಂಡ್‌ ಯಾರ್ಡು, ಸುಪ್ರೀಂ ಕೋರ್ಟು ಬ್ರಾಂಚ್ ಆಫೀಸು ಓಪನ್ ಮಾಡಬೇಕಾಯ್ತದೆ. ಅಕ್ರಮ ಸಂಸ್ಥಾಪನಾರ್ಥಾಯ ಪಾಲಿಕೆ ಸಂಭವಾಮಿ ಯುಗೇಯುಗೇ!’ ಅಂದ ತುರೇಮಣೆ, ಪಾಲಿಕೆಯ ಬಿಲ್ ಎತ್ತಿ ವಿಶ್ವರೂಪ ತೋರಿಸಿದರು!

ಪ್ರತಿಕ್ರಿಯಿಸಿ (+)