ಮಂಗಳವಾರ, ನವೆಂಬರ್ 19, 2019
29 °C

ರಾಮ, ಕೃಷ್ಣ...

Published:
Updated:
Prajavani

‘ಇದೇನ್ಸಾರ್ ಇ.ಡಿ, ಐ.ಟಿಯೋರು ಚಿದಂಬರಂ, ಡಿಕೆಶಿ, ಪರಮಣ್ಣನಂಥಾ ಘಟಾನುಘಟಿಗಳ ಮ್ಯಾಲೆ ಮುರಕಂಡು ಬಿದ್ದವರೆ!’ ಅಂದೆ. ‘ಐ.ಟಿಯೋರೇನು ಮಾಡಾರೋ ಪಾಪ. ರಾಮ-ಕೃಷ್ಣ-ಗೋಯಿಂದನ ಹೆಸರಿನೋರದೇ ಕಾಲ ಈಗ. ಬ್ಯಾರೆ ಹೆಸರಿನೋರಿಗೆ ದುರ್ದೆಸೆ ಕಣ್ಲಾ’ ಅಂದುದ್ದು ನನಗೇನೂ ಅರ್ಥಾಗಲಿಲ್ಲ.

‘ಥೂ ಏನ್ಸಾರ್ ಕ್ಯಾತೆ ನಿಮ್ದು’ ಅಂದೆ. ‘ಮಂತೆ ನರೇಂದ್ರ ದಾಮೋದರದಾಸ್ ಅಂತ ಕೃಷ್ಣನ ಹೆಸರು ಮಡಿಕ್ಕಂಡಿದ್ದಕ್ಕೇ ಮೋದಿ ಪ್ರಧಾನಿಯಾಗಿದ್ದು! ಚಿದಂಬರಂ, ಡಿಕೆಶಿ, ಪರಮೇಶಣ್ಣನ ಹೆಸರಲ್ಲಿ ರಾಮ-ಕೃಷ್ಣ-ಗೋಯಿಂದ ಇಲ್ಲ! ತಲೆ ಖರ್ಚು ಮಾಡ್ಲಾ!’ ಅಂತ ನನ್ನ ಬುಡಕ್ಕೇ ನೀರು ತಂದ್ರು. ‘ಥೋ ಏನು ರೋದನೆ ಸಾರ್ ನಿಮ್ದು. ಎಲ್ಲೋದ್ರೂ ಬೆಂಕಿ ಇಕ್ಕದೇ ಕೆಲಸವಾ’ ಅಂದೆ.

‘ಲೋ ಹೈವಾನ್, ನಮ್ಮ ಡಿಸಿಎಂ ಕಾರಜೋಳದ ಗೋವಿಂದ, ಸವದೀ ಲಕ್ಷ್ಮಣ, ಅಶ್ವತ್ಥ ನಾರಾಯಣ ರಾಮ- ಕೃಷ್ಣ- ಗೋಯಿಂದನ ಹೆಸರಿನೋರಲ್ಲುವೇ! ಅದಿಕ್ಕೇ ಅವರಿಗೆ ಅಧಿಕಾರ ಹುಡಿಕ್ಕಬಂತು! ಈಶ್ವರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸ್ವಲ್ಪ ಮೊದಲೇ ರಾಮಪ್ಪ, ಗೋಯಿಂದ ಶೆಟ್ಟರ್, ರಾಮರಾಜ ಬೊಮ್ಮಾಯಿ ಅಂತ ಹೆಸರು ಬದ್ಲಾಸಿಕಂಡಿದ್ರೆ ಇನ್ನೂ ಮೂರು ಡಿಸಿಎಂ ಅಲಾಯಿದವಾಗಿ ಸಿಗತಿದ್ದೋ’ ಅಂದ್ರು.

‘ಸಾರ್ ಕಮಲದೋರೇನೋ ಪಕ್ಸದಗೆ ಕಂಟ್ರೋಲ್ ಮಡಿಕ್ಕತಾವರೆ. ನೀವೇನು ಸಾರ್ ಮಜ್ಜಿಗೇಲಿ ಕೈ ಅಲ್ಲಾಡಿಸಕ್ಕೋಯ್ತಾ ಇದೀರ!’ ಅಂತಂದೆ.

‘ಕೇಳ್ಲಾ, ಅನರ್ಹ ಅಳಿಯಂದಿರು ರಾಮ-ಕೃಷ್ಣನ ಹೆಸರಿಲ್ಲದ ಬಸವರಾಜ, ನಾಗರಾಜ, ಸೋಮಶೇಖರಣ್ಣನ್ನ ಮುಂದಕ್ಕೆ ಬಿಟ್ಟಿದ್ದೇ ಎಡವಟ್ಟಾಯ್ತು! ಸಿದ್ದರಾಮಣ್ಣನ ಹೆಸರಲ್ಲಿ ರಾಮ ಇರದೇ ಅವರಿಗೆ ರಕ್ಷೆ! ಯಡುರಪ್ಪಾರು, ರೇಣುಕಣ್ಣ ಹೆಸರು ಬದ್ಲಾಸಿಕಂಡರೆ ಅವರಿಗೆ ದೆಸೆ ತಿರಗಬಹುದು. ರಾಜಕೀಯದ ಕುಳಗಳೆಲ್ಲಾ ತಕ್ಷಣ ರಾಮರಾಜ್, ರಾಮಯ್ಯ, ರಾಮೇಗೌಡ ಅಂತ ಹೆಸರು ಚೇಂಜ್ ಮಾಡಿಕೊಂಡರೆ ಉಳಕತ್ತರೆ. ಇಲ್ಲಾಂದ್ರೆ ಕೃಷ್ಣ ಜನ್ಮಸ್ಥಾನವೇ ಗತಿ!’ ಅಂದ್ರು. ನನಗೆ ತಲೆಗಿರ್ ಅಂದು, ಕೈಬುಟ್ಟ ಮೆಡಿಕಲ್ ಸೀಟ್ ಥರಾ ಬಿದ್ದೋದೆ.

ಪ್ರತಿಕ್ರಿಯಿಸಿ (+)