ಮಂಗಳವಾರ, ನವೆಂಬರ್ 12, 2019
24 °C

ಅಶಾಂತಿಯ ಕೂಟ!

Published:
Updated:
Prajavani

ಭಾರತ ಜನನಿಯು ತನುಜಾತೆ ಕನ್ನಡಮ್ಮನನ್ನು ಕಕ್ಕುಲತೆಯಿಂದ ವಿಚಾರಿಸಿದಳು- ‘ಮಗಳೆ, ನೀನು ಭೂದೇವಿಯ ಮಕುಟದ ನವಮಣಿ. ಇದು ನಿನ್ನ ಹುಟ್ಟುಹಬ್ಬದ ಮಾಸ. ಉಂಡುಟ್ಟು ಸಡಗರದಿಂದ ಇರಬೇಕಾದ ಕಾಲದಲ್ಲಿ ಯಾಕಮ್ಮ ಈ ದುಃಖ?’

‘ಅಮ್ಮ, ಏನು ಹೇಳಲಿ. ನಾನು ನಿನ್ನ ಗಜಗರ್ಭದಿಂದ ಹೊರಬರುವಾಗಲೇ ಎಷ್ಟು ಕಷ್ಟವಾಯ್ತು. ಈಗ ನನ್ನ ಮಕ್ಕಳ, ಅರ್ಥಾತ್ ನಿನ್ನ ಮೊಮ್ಮಕ್ಕಳ ಕಾಲದಲ್ಲಿ ನನಗೆ ಶಾಂತಿ ಇಲ್ಲವಾಗಿದೆ’.

‘ಏನಾಗಿದೆ ಮಗಳೆ, ನೀನು ಸರ್ವಜನಾಂಗದ ಶಾಂತಿಯ ತೋಟ ಅಲ್ವೆ?’

‘ಅದು ರಾಷ್ಟ್ರಕವಿಗಳ ಭಾವನಾತ್ಮಕ ದೃಷ್ಟಿಯಲ್ಲಿ– ವಾಸ್ತವವಾಗಿ ನಾನು ಅಶಾಂತಿಯ ಕೂಟವಾಗಿದ್ದೇನೆ. ಹೊಂದಿಕೊಂಡು ಹೋಗಲು ಮಕ್ಕಳು ತಯಾರಿಲ್ಲ. ಅಧಿಕಾರಸ್ಥರು, ಅತೃಪ್ತರು, ಅನರ್ಹರು ಅಂತ ಮೂರು ಗುಂಪು ಕಟ್ಕೊಂಡು ಮನೆಯ ಯಜಮಾನಿಕೆಗಾಗಿ ಕಿತ್ತಾಡ್ತಿದಾರೆ’.

‘ದೊಡ್ಡ ಗುಂಪಿಗೆ ಅಧಿಕಾರ ಕೊಟ್ರಾಯ್ತು!’

‘ಎರಡು ಗುಂಪುಗಳು ಸೇರಿದ ದೊಡ್ಡ ಗುಂಪಿಗೆ ಕೊಟ್ಟಿದ್ದೆ, ಒಂದೂವರೆ ವರ್ಷದೊಳಗೇ ಜಗಳವಾಡಿಕೊಂಡು ಬೇರೆಯಾದ್ರು’.

‘ಮೂರನೇ ಗುಂಪಿಗೆ ಚಾನ್ಸ್ ಕೊಟ್ಟೆಯಾ?’ ‘ಹ್ಞೂಂನಮ್ಮಾ, ನೂರು ದಿನ ಯಜಮಾನಿಕೆ ಮಾಡೋದ್ರಲ್ಲೇ ಹೊರಹೊಡೆತ, ಒಳಹೊಡೆತ
ಗಳಿಂದ ಮಗ ಹೈರಾಣಾಗಿದಾನೆ’.

‘ಯಾರಾದ್ರೂ ದೊಡ್ಡೋರಿಂದ ಪಂಚಾಯಿತಿ ಮಾಡಿಸಬೇಕಾಗಿತ್ತು’. ‘ಪಂಚಾಯಿತಿ ಮಾಡೋರು ತೊಟ್ಟಿಲೂ ತೂಗ್ತಾರೆ, ಮಗೂನೂ ಚಿವುಟ್ತಾರೆ. ಒಬ್ರು ಧ್ಯಾನ ಮಾಡೋಕೆ ವಿದೇಶಕ್ಕೆ ಹೋಗಿದಾರೆ’.

‘ಧ್ಯಾನ, ಧರ್ಮ, ಅಧ್ಯಾತ್ಮಕ್ಕೆ ಬೇರೆ ದೇಶದವರು ನಮ್ಮಲ್ಲಿಗೆ ಬರ‍್ತಾರೆ. ನಮ್ಮವರು ವಿದೇಶಕ್ಕೆ ಹೋಗೋದೂಂದ್ರೆ...?’

‘ಇನ್ನೊಬ್ರು?’

‘ತನ್ನ ಮಗನಿಗೇ ಮತ್ತೆ ಯಜಮಾನಿಕೆ ಪಡೆಯಲು ಹೊಂಚು ಹಾಕ್ತಿದಾರೆ’.

‘ಮಗ?’

‘ಸಿನಿಮಾ ತೆಗೆಯೋಕೆ ಲಂಡನ್‌ಗೆ ಹೋಗಿದಾರೆ’.

‘ಇಲ್ಲಿ ನಾಟಕ, ಅಲ್ಲಿ ಸಿನಿಮಾನಾ? ತಲೆ ಕೆಡಿಸಿಕೊಳ್ಳಬೇಡ ಮಗಳೆ, ಸ್ವಲ್ಪ ದಪ್ಪ ಚರ್ಮ ಬೆಳೆಸಿಕೋ. ಏಕಚಕ್ರಾಧಿಪತ್ಯದ ಈ ‘ಶಾ’ಣ್ಯಾ ದಿನಗಳಲ್ಲಿ ಇವೆಲ್ಲಾ ಸಹಜ. ಕಾಲಾಯ ತಸ್ಮೈ ನಮೋ’ ಎಂದು ಭಾರತ ಜನನಿಯು ಕರ್ನಾಟಕ ಮಾತೆಯ ತಲೆ ನೇವರಿಸಿ ಮಾಯವಾದಳು!

ಪ್ರತಿಕ್ರಿಯಿಸಿ (+)