ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಡ ಮತ್ತು ಗುಡ್ಡ!

Last Updated 14 ನವೆಂಬರ್ 2019, 20:32 IST
ಅಕ್ಷರ ಗಾತ್ರ

‘ಗುಡ್ಡೆ’ ಚಾದಂಗಡಿ ಮುಂದೆ ಗಡ್ಡದ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ‘ಲೇ ಗುಡ್ಡೆ, ಗಡ್ಡದಾಗೆ ಎಷ್ಟು ವೆರೈಟಿ ಅದಾವಲೆ?’ ದುಬ್ಬೀರ ಕೇಳಿದ.

‘ಗಡ್ಡದಾಗ? ಬಹಳ ಅದಾವು. ಬುದ್ಧಿಜೀವಿ ಗಡ್ಡ, ವಿರಹಿ ಗಡ್ಡ, ಕುರುಚಲು ಗಡ್ಡ, ಋಷಿ ಗಡ್ಡ, ಖುಷಿ ಗಡ್ಡ, ಈಗಿನ ಹುಡುಗರು ಬಿಡೋ ಕೊಯ್ಲಿ ಗಡ್ಡ, ಬೋಳಿಸೋಕೆ ಮನಸ್ಸಿಲ್ಲದ ಸೋಮಾರಿ ಗಡ್ಡ... ಸಾಕಾ?’ ಗುಡ್ಡೆ ನಕ್ಕ.

‘ಅಷ್ಟೇನಾ? ಇನ್ನೂ ಅದಾವೆ ಬರ‍್ಕಾ. ಸೋಲಿನ ಗಡ್ಡ, ಸವಾಲಿನ ಗಡ್ಡ, ಜೈಲಿನ ಗಡ್ಡ, ಯೋಗಿ ಗಡ್ಡ, ರೋಗಿ ಗಡ್ಡ...’

‘ಅದ್ಸರಿ, ಈ ಸೋಲಿನ ಗಡ್ಡ, ಸವಾಲಿನ ಗಡ್ಡ ಅಂದ್ರೆ ಯಾವುದು?’

‘ಎಲೆಕ್ಷನ್‍ನಲ್ಲಿ ಸೋತವರು ಬಿಡೋದು ಸೋಲಿನ ಗಡ್ಡ. ಬೈ ಎಲೆಕ್ಷನ್‍ನಲ್ಲಿ ಅನರ್ಹರನ್ನ ಸೋಲಿಸೋವರೆಗೆ ಬೋಳಿಸೋದಿಲ್ಲ ಅಂತ ಸಿದ್ರಾಮಯ್ಯ ಬಿಟ್ಟಿದಾರಲ್ಲ, ಅದು ಸವಾಲಿನ ಗಡ್ಡ’ ದುಬ್ಬೀರ ವಿವರಿಸಿದ.

‘ಓಕೆ, ಮತ್ತೆ ಇದ್ಯಾವುದು ಜೈಲಿನ ಗಡ್ಡ?’

‘ಅದು ಡಿಕೆಶಿ ಗಡ್ಡ ಕಣಲೆ, ನನ್ನನ್ನ ಜೈಲಿಗೆ ಕಳಿಸಿದವರಿಗೆ ಪಾಠ ಕಲಿಸೋವರೆಗೆ ಬೋಳಿಸಲ್ಲ ಅಂತ ಬಿಟ್ಟಿದಾರಲ್ಲ, ಆ ಗಡ್ಡ...!

‘ಆಯ್ತು ಬಿಡಪ್ಪ, ಈಗ ಗಡ್ಡಕ್ಕೂ ಗುಡ್ಡಕ್ಕೂ ಏನು ವ್ಯತ್ಯಾಸ?’

‘ವ್ಯತ್ಯಾಸ ಏನಿಲ್ಲ, ಎರಡೂ ದೂರ ಇದ್ದಾಗ ನುಣ್ಣಗೇ ಕಾಣ್ತವೆ. ‘ದೂರದ ಗಡ್ಡ ನುಣ್ಣಗೆ’ ಅಂತ ಹೊಸ ಗಾದೆ ಬರೀಬಹುದು’ ದುಬ್ಬೀರ ನಕ್ಕ.

ಅಷ್ಟರಲ್ಲಿ ಹಿಂದಿನಿಂದ ‘ಏನ್ರಲೇ, ಇಬ್ರೂ ಸೇರ್ಕಂಡು ಗಡ್ಡನ ಗುಡ್ಡ ಮಾಡ್ತಿದೀರಲ್ಲ, ನಿಮಗೇನು ಮಾಡಾಕೆ ಕೆಲ್ಸ ಇಲ್ಲೇನು? ಅರ್ಧ ಚಾ ಹೇಳ್ರಿ...’ ಎಂದ ಧ್ವನಿ ಕೇಳಿಸಿತು.

ತಿರುಗಿ ನೋಡಿದರೆ ಯಾರೋ
ಗಡ್ಡಧಾರಿ! ‘ಏಯ್ ಯಾರಪ್ಪ ನೀನು?’ ಗುಡ್ಡೆ ಪ್ರಶ್ನಿಸಿದ.

‘ಥೂ ನಿಮ್ಮ, ನಾನು ಕಣ್ರಲೇ ತೆಪರೇಸಿ. ಸಾಲಗಾರರ ಕಾಟದಿಂದ ತಪ್ಪಿಸ್ಕೊಳಕ್ಕೆ, ಅವ್ರಿಗೆ ಗುರುತು ಸಿಗದಂಗೆ ಗಡ್ಡ ಬಿಟ್ಟಿದ್ದೀನಿ. ಇದು ಸಾಲದ ಗಡ್ಡ’ ತೆಪರೇಸಿ ನಕ್ಕ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT