ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಬೋಮಂಡಲ

Last Updated 25 ನವೆಂಬರ್ 2019, 19:07 IST
ಅಕ್ಷರ ಗಾತ್ರ

‘ಸ್ವಾಮಿಗಳು ಈಗ ಭಾಳಾ ಪವರ್‌ಫುಲ್ ಆಗಿ ಬುಟ್ಟವ್ರೆ ಸಾರ್?’ ಅಂದೆ. ‘ಅರಮನೆ- ಗುರು ಮನೇಲಿ ನಮ್ಮ ದಾಮುಸ್ವಾಮಿಗಳ ಥರಾ ವಸಿ ತಗ್ಗಿ-ಬಗ್ಗಿ ನಡೀಬೇಕು ಕಲಾ! ಈಗ ಸ್ವಾಮಿಗೋಳು ಮುಂದಿನ ಮುಖ್ಯಮಂತ್ರಿ ಯಾರಾಗಿರಬೇಕು ಅಂತ ಪರ್ಮಾನ್ ಹೊರಡಿಸ್ತರೆ ಗೊತ್ತೋ!’ ಅಂದ್ರು.

‘ಸಾ, ನಾನು ಹೇಳತಾ ಇರದು ನಮ್ಮ ಬೆಂಗಳೂರು ಪಕ್ಕದ ದಿಡಬಿ ನೃತ್ಯಾನಂದ ಸ್ವಾಮಿಗಳ ಬಗ್ಗೆ!’ ಅಂತ ಹೇಳಿದೆ.

‘ನಾನು ಡೆಲ್ಲಿ ಶಾಮಿ ಸ್ವಾಮಿಗಳ ಬಗ್ಗೆ ಹೇಳ್ತಾವನಿ ಕಲಾ’ ಅಂದ್ರು.

‘ಸಾರ್, ನಮ್ಮ ನೃತ್ಯಾನಂದರು ಕೂತ ಕಡೇಲೆ ಎಲ್ಲಾ ಕಾಣೋವಂತ ಮಿಸೀನು ಕಂಡಿ ಡದವರಂತೆ. ಅದುನ್ನ ನಮ್ಮ ಬೆಂಗಳೂರು ಬಿಬಿಎಂಪಿ ಆಪೀಸಿನಲ್ಲಿ ಯಾಕೆ ಪಿಕ್ಸ್ ಮಾಡ ಬಾರದು? ಯಾವಯಾವ ರಸ್ತೆ ಅವ್ವೆವಸ್ಥೆ ಆಗದೆ ಅಂತ ಮಾನ್ಯ ಮಹಾಪೌರರು ಕೂತುದ್ದ ಕಡೇಲೇ ಕಂಡ್ಕಬೌದಲ್ವೆ?’ ಅಂದೆ.

‘ಲೋ ಮಳ್ಳೆಬೋರ ಬಿಬಿಎಂಪಿ ಮಾಯ್ಕಾರರು ಹೈಕೋರ್ಟಿಗೇ ದಕ್ಕಲಿಲ್ಲ, ಇನ್ನು ಈ ನಿರ್ವಾಕಿಲ್ಲದ ಮಿಸೀನಿಗೆ ಹೆದರಿ ಕಂಡಾರಲಾ? ನೋಡು ನಿಮ್ಮ ಥತ್‍ಪುರುಷ ದಿಡಬಿ ಸ್ವಾಮುಗುಳು ರಾಮನಗರದ ಪೊಲೀ ಸಿನೋರಿಗೆ ಎಪ್ಪೆಸ್ ಮಾಡಿ ಹಿಂದ್ಲ ಗ್ವಾಡೆ ನೆಗೆದು ಕಡದು ಹೊಂಟೋಗವುರೆ’ ಅಂದ್ರು.

‘ಸಾರ್ ಈಯಪ್ಪನು ಕೋತಿಗಳಿಗೆ ಮಾತು ಬರಿಸ್ತರಂತೆ. ಹಂಗಂತ ಹೇಳವುರೆ! ನಿಜವಾ?’ ಅಂತ ಕೇಳಿದೆ.

‘ಲೋ ಕೋತಿಗಳಿಗೇನ್ಲಾ ಮಾತು ಬರಿಸದು. ಅವು ಈಗಾಗಲೇ ಮಾತು ಕಲಿತ್ಕಂದು ರಾಜ ಕೀಯಕ್ಕೆ ಬಂದು ಸೇರಿಬುಟ್ಟವೆ. ಯರ‍್ರಾಬಿರ‍್ರಿ ಬೈಕ್ಯಂಡು ಬೇಲಿ ಹಾರತಾವೆ. ಬೆಣೆ ಕಿತ್ತು ತಮ್ಮದೇ ಬಾಲ ತುರುಕಿ ಬಾಯಿ ಬಡಕತ್ತವೆ. ಈ ರೋದನೆ ಕೇಳಿ ಕಿವಿ-ಕಣ್ಣೆಲ್ಲಾ ತೂತು ಬಿದ್ದೋಗದೆ!’ ಅಂದ್ರು.

‘ಅಲ್ಲ ಸಾ, ರಾಜಕೀಯದ ಕೋತಿಗಳ ಮಾತಿನ ಅವತಾರವ ಏನಂತ ಕರಿಬಹುದು ಹೇಳಿ ಬುಡಿ’ ಅಂತಂದೆ.

‘ಲೋ ಮಂಗ ಮುಂಡೇದೆ, ಈ ಲಾಗ ಭೂಷಣರ ಮಾತನ್ನು ಲಬೋಮಂಡಲ ಅಂತಲ್ದೆ ಇನ್ನೇನನ್ನಕೆ ಸಾಧ್ಯವೋ?’ ಅಂದ್ರು. ಪಾಪ ಮಂಕಿಗಳ ಮಾತಿಗೆ ಎಂಥಾ ಅವಮಾನ, ಹೌದಲ್ಲವರಾ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT