ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬದಲಿಸಿಕೊಳ್ಳಿ!

Last Updated 27 ನವೆಂಬರ್ 2019, 19:40 IST
ಅಕ್ಷರ ಗಾತ್ರ

ಬೇಸರ ಮತ್ತು ಕೋಪದಲ್ಲಿ ದೇವೇಂದ್ರನ ಅರಮನೆ ಪ್ರವೇಶಿಸಿದರು ಚಾಣಕ್ಯ. ‘ಏಕೆ ಕೌಟಿಲ್ಯರೇ ಮುಖ ಕಪ್ಪಿಟ್ಟಿದೆ’ ಕೇಳಿದ ಇಂದ್ರ. ‘ಭೂಲೋಕದಲ್ಲಿ ನನ್ನ ಮಾನನಷ್ಟವಾಗುತ್ತಿದೆ. ದುಷ್ಟಕೃತ್ಯಗಳಿಗೆ, ಕುತಂತ್ರಗಳಿಗೆಲ್ಲ ಚಾಣಕ್ಯನ ನೀತಿ ಅಂತ ಹೇಳಿ ನನ್ನ ಹೆಸರನ್ನು ಹಾಳು ಮಾಡಲಾಗುತ್ತಿದೆ. ಅದಕ್ಕೆ ನನ್ನ ಹೆಸರನ್ನೇ ಬದಲಿಸಿಕೊಳ್ಳಲು ನಿರ್ಧರಿಸಿದ್ದೇನೆ’ ದೃಢವಾಗಿ ಹೇಳಿದರು ಕೌಟಿಲ್ಯ.

‘ದುಡುಕಬೇಡಿ ಗುರುವರ್ಯ. ಇದು ನಿಮ್ಮೊಬ್ಬರ ಸಮಸ್ಯೆಯಲ್ಲ. ಸ್ವರ್ಗಲೋಕದವರ ಮೇಲೆ ಭೂಲೋಕದವರ ಪ್ರಭಾವ ಹೆಚ್ಚುತ್ತಿದೆ. ನಮ್ಮನ್ನು ನೋಡಿ ಅವರು ಕಲಿಯುತ್ತಿದ್ದರು. ಈಗ ಅವರನ್ನು ನೋಡಿ ನಾವು ಕಲಿಯುವಂತಾಗಿದೆ’.

‘ಈಗ ನಿಮಗೇನಾಯಿತು ದೇವೇಂದ್ರ?’

‘ಇನ್ನೂ ಎಷ್ಟು ದಿನ ಸ್ವರ್ಗದ ಅಧಿಪತಿ ನೀವೇ ಆಗಿರುತ್ತೀರಿ, ಚುನಾವಣೆ ನಡೆಸಿ ಅಂತ ದೇವಾನುದೇವತೆಗಳು ಒತ್ತಾಯಿಸುತ್ತಿದ್ದಾರೆ. ಈ ಚುನಾವಣೆಗಳಲ್ಲಿ ಗೆಲ್ಲೋದು ಹೇಗೆ, ಗೆದ್ದರೂ ಮತ್ತೆ ನಾನೇ ಅಧಿಪತಿ ಆಗೋದು ಹೇಗೆ ಅಂತ ಗೊತ್ತಿಲ್ಲ’ ಚಿಂತಾಕ್ರಾಂತನಾಗಿ ಹೇಳಿದ ಇಂದ್ರ.

‘ವಿರೋಧಿ ಪಾಳಯದಲ್ಲಿನ ದುಷ್ಟ, ಭ್ರಷ್ಟರ
ನ್ನೆಲ್ಲ ಕರ್ಕೊಂಡು ಬಂದು, ಇವರು ಒಳ್ಳೆಯವರು ಅಂತ ಆಸ್ಥಾನದ ದರ್ಬಾರಿನಲ್ಲಿಯೇ ಘೋಷಿಸಿ. ಆಗ ಅವರೆಲ್ಲ ನಿಮಗೆ ಬೆಂಬಲ ಕೊಡ್ತಾರೆ’ ಸಲಹೆ ಕೊಡಲಾರಂಭಿಸಿದರು ಚಾಣಕ್ಯ.

‘ಉಪಾಯ ಚೆನ್ನಾಗಿದೆ, ಮುಂದೆ ಹೇಳಿ’.

‘ಚುನಾವಣೆ ನಡೆಸುವುದಕ್ಕೆ ಸಮಯ ವಾಗುತ್ತೆ. ಆಕಾಂಕ್ಷಿತರೆಲ್ಲ ಸೇರಿ ಮ್ಯೂಸಿಕಲ್ ಚೇರ್ ಆಡೋಣ. ಅದರಲ್ಲಿ ಗೆದ್ದವರೇ ಸ್ವರ್ಗಾಧಿಪತಿ ಎನ್ನಿ. ಇಡೀ ದಿನ ಹಾಡು ಹಾಕಿ, ಮರುದಿನ ಬೆಳಿಗ್ಗೆ 5.45ಕ್ಕೆ ನಾನು ಹಾಡು ನಿಲ್ಲಿಸ್ತೀನಿ. ಎಲ್ಲರೂ ನಿದ್ದೆಗಣ್ಣಲ್ಲಿರ್ತಾರೆ. ನೀವು ಕುಳಿತುಬಿಡಿ’ ನಕ್ಕರು ಚಾಣಕ್ಯ.

ಸಮಯ ವ್ಯತ್ಯಾಸವಾಯಿತು. ಹಾಡು ನಿಂತಾಗ ಆಸನದಲ್ಲಿ ಕುಳಿತಿದ್ದ ‘ಉದ್ಧವ’ ಮೂರ್ತಿ!

‘ನನ್ನನ್ನು ಕತ್ತಲಲ್ಲಿಟ್ಟು ಮ್ಯೂಸಿಕಲ್ ಚೇರ್ ಆಡಿದಿರಿ. ಆದರೆ, ‘ಗಡಿಯಾರ’ ನನ್ನ ಕೈಯಲ್ಲೇ ಇದೆ ಅನ್ನೋದು ಮರೆತಿರಿ. ಪವರ್ ಪ್ಲೇ ನನಗೂ ಗೊತ್ತು. ‘ಶರದ್ ಋತು’ವಿನಲ್ಲೂ ಬಿಸಿ ಏರಿಸಬಲ್ಲೆ’ ನಕ್ಕ ಬ್ರಹ್ಮ.

ಚಾಣಕ್ಯರನ್ನು ಬಳಿಗೆ ಕರೆದ ದೇವೇಂದ್ರ ಅವರ ಕಿವಿಯಲ್ಲಿ ಉಸುರಿದ ‘ದಯವಿಟ್ಟು ನಿಮ್ಮ ಹೆಸರು ಬದಲಿಸಿಕೊಳ್ಳಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT