ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರ್ ಕಣ್ಣೀರ್...!

Last Updated 28 ನವೆಂಬರ್ 2019, 19:43 IST
ಅಕ್ಷರ ಗಾತ್ರ

ಹರಟೆಕಟ್ಟೆಯಲ್ಲಿ ತೆಪರೇಸಿ ಮಿರಿಮಿರಿ ಮಿಂಚುತ್ತಿದ್ದ! ಹತ್ತು ಬೆರಳಿಗೂ ಉಂಗುರ, ಕೊರಳಲ್ಲಿ ಚಿನ್ನದ ಚೈನು, ಹೊಸ ಬಟ್ಟೆ, ಕಾಲಲ್ಲಿ ಬ್ರ್ಯಾಂಡೆಡ್ ಶೂ! ತೆಪರೇಸಿ ಗೆಟಪ್ ನೋಡಿದ ಗುಡ್ಡೆ ‘ಲೇ ತೆಪರ, ವಾರದಿಂದ ಎಲ್ಲಿ ಹಾಳಾಗಿ ಹೋಗಿದ್ದೆಲೆ? ಮೊನ್ನೆ ಪೊಲೀಸ್‍ನೋರು ನಿನ್ನ ಹುಡಿಕ್ಕಂಡ್ ಬಂದಿದ್ರು’ ಅಂದ.

‘ಪೊಲೀಸ್‍ನೋರಾ? ನನ್ನಾ? ಯಾಕಪ್ಪ, ಏನಂತೆ?’

‘ಅಲ್ಲೆಲ್ಲೋ ಕಳ್ಳತನ ಆಗಿತ್ತಂತೆ. ಒಡವೆ, ರೊಕ್ಕ ಎಲ್ಲ ಕದ್ದಾರಂತೆ. ಕಳ್ಳ ನಿನ್ ತರಾನೇ ಇದ್ದ ಅಂತಿದ್ರಪ...’

‘ಹೌದೌದು, ಲೇ ತಮ್ಮಾ ಈ ಉಂಗುರ, ಚೈನು ಎಲ್ಲ ಕದ್ದ ಮಾಲಲ್ಲ. ಬೈ ಎಲೆಕ್ಷನ್ ಪ್ರಚಾರಕ್ಕೋಗಿ ದುಡಿದಿರೋದು. ಅಲ್ಲಿ ಹೊಸಕೋಟೇಲಿ ಚಿನ್ನದ ಉಂಗುರ, ಇಲ್ಲಿ ಹೊಸಪೇಟೇಲಿ ಚಿನ್ನದ ನಾಣ್ಯ ಹಂಚೋಕೆ ನನಗೇ ಕೊಟ್ಟಿದ್ರು. ಅದ್ರಲ್ಲಿ ನಾನೂ ಒಂದಿಷ್ಟು ಕಮಾಯಿ ಮಾಡ್ಕಂಡೆ, ತಪ್ಪಾ?’ ತೆಪರೇಸಿ ವಾದಿಸಿದ.

‘ಆದ್ರೂ ಅದು ಕದ್ದಂಗೇ ಅಲ್ವ?’ ದುಬ್ಬೀರ ನಕ್ಕ. ‘ಲೇಯ್, ರಾಜಕಾರಣಿಗಳು ಹೊಡ್ಕಂಡಿ
ದ್ರಲ್ಲಿ ಇವನೂ ಒಂದಿಷ್ಟು ದುಡ್ಕಂಡಿದಾನೆ ಬಿಡ್ರಲೆ’ ಎಂದು ತಿಪ್ಪೆ ಸಾರಿಸಿದ ಪರ್ಮೇಶಿ.

‘ಆಯ್ತು ಈಗ ಅದನ್ನ ಬಿಡ್ರಿ, ಬೈ ಎಲೆಕ್ಷನ್ ಹೊಸ ಸಮಾಚಾರ ಏನು?’ ದುಬ್ಬೀರ ಪ್ರಶ್ನಿಸಿದ.

‘ಕುಮಾರಸ್ವಾಮಿ ಅತ್ತರಂತೆ’ ಗುಡ್ಡೆ ಉತ್ತರ. ‘ಲೇಯ್, ನಾನು ಹೊಸ ಸಮಾಚಾರ ಕೇಳಿದ್ದು’.

‘ಓಕೆ, ಹುಳಿಮಾವು ಕೆರೆ ಒಡೀತಂತೆ’.

‘ಅಂದ್ರೆ ಕುಮಾರಸ್ವಾಮಿ ಕಣ್ಣೀರಿಗೂ ಕೆರೆ ಒಡೆದಿದ್ದಕ್ಕೂ ಲಿಂಕ್ ಮಾಡ್ತಾ ಇದೀಯ?’

‘ಥು ಇಲ್ಲಪ್ಪ, ಹೊಸ ಸಮಾಚಾರ ಅಂದೆ’.

‘ನಿಮಗೆ ಕುಮಾರಸ್ವಾಮಿ ಅತ್ತದ್ದು ಮಾತ್ರ ಕಾಣುಸ್ತತಿ, ಆನಂದ್‍ಸಿಂಗ್ ಅತ್ತಿದ್ದು ಕಾಣ್ಸಲ್ವ?’ ತೆಪರೇಸಿಗೆ ಕೋಪ.

‘ಅವರ್‍ಯಾಕೆ ಅತ್ತರಂತೆ?’

‘ಅದು ತ್ಯಾಗದ ಕಣ್ಣೀರಂತೆ’.

‘ಅಯ್ಯೋ ಅವರ ಕಣ್ಣೀರೆಲ್ಲ ತಗಂಡು ನಾವೇನ್ ಮಾಡಾಣ ಬಿಡ್ರಲೆ, ಬೆಳಿಗ್ಗೆ ನನ್ ಹೆಂಡ್ತೀನೂ ಕಣ್ಣೀರಾಕ್ತಿದ್ಲಪ್ಪ’ ದುಬ್ಬೀರ ಹೇಳಿದ.

‘ಹೌದಾ? ಯಾಕಂತೆ?’

‘ಅದು ಈರುಳ್ಳಿ ಕಣ್ಣೀರು ಕಣ್ರಲೆ, ರೇಟ್ ಕೇಳಿದೀರಾ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT