ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮೇಕಪ್‌

Last Updated 31 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

‘ರೀ, ಈ ಕನ್ನಡಿಗೆ ವಯಸ್ಸಾಗಿದೆ, ನನ್ನನ್ನು ವಯಸ್ಸಾಗಿರುವವಳಂತೆ ತೋರಿಸುತ್ತಿದೆ, ಇದನ್ನು ಎಸೆದು ಹೊಸ ಕನ್ನಡಿ ತರಬೇಕು...’ ಕನ್ನಡಿ ಮುಂದೆ ನಿಂತ ಸುಮಿಗೆ ಸಿಟ್ಟು ಬಂತು.

‘ವಯಸ್ಸಾಗಿರೋದು ಕನ್ನಡಿಗಲ್ಲ, ನಿನಗೆ. ಹೋದ ಹೊಸ ವರ್ಷದಲ್ಲಿ ಇದ್ದಷ್ಟು ಅಂದವಾಗಿ ಈಗಿಲ್ಲ ನೀನು’ ಗಂಡ ಶಂಕ್ರಿ ಗೋಡೆಗೆ ಕ್ಯಾಲೆಂಡರ್ ನೇತುಹಾಕಿದ.

‘ನನಗೆ ವಯಸ್ಸಾಗಿಬಿಟ್ಟಿತೇ?!’ ಸುಮಿಗೆ ಸಂಕಟ. ‘ನಿನಗೆ ಮಾತ್ರವಲ್ಲ, ನಿನ್ನ ಸ್ನೇಹಿತೆಯರಿಗೂ ವಯಸ್ಸಾಗಿದೆ, ಸಮಾಧಾನ ಮಾಡಿಕೊ. ವರ್ಷಕ್ಕೊಂದು ಬರ್ತ್‌ಡೇ ಆಚರಿಸಿಕೊಂಡರೆ ವಯಸ್ಸಾಗದೇ ಇರುತ್ತಾ? ಇನ್ಮೇಲೆ ಐದಾರು ವರ್ಷಕ್ಕೊಮ್ಮೆ ಜನ್ಮದಿನ ಆಚರಿಸಿಕೊಂಡು ವಯಸ್ಸನ್ನು ಕಂಟ್ರೋಲ್ ಮಾಡಿಕೊ. ಹಾಗೇ, ಪ್ರತೀ ವರ್ಷ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ಳೋಣ ಅಂತ ಪೀಡಿಸಬೇಡ, ಏಳೆಂಟು ವರ್ಷಕ್ಕೊಮ್ಮೆ ಆಚರಿಸಿಕೊಂಡರೆ ಸಾಕು’ ಶಂಕ್ರಿ ಸಲಹೆ ಕೊಟ್ಟ.

‘ವೆಡ್ಡಿಂಗ್ ಆ್ಯನಿವರ್ಸರಿಯಲ್ಲಿ ಹೊಸ ಒಡವೆ, ಹೊಸ ಸೀರೆ ಇದ್ದರೂ ಅದೇ ಗಂಡ, ಅದೇ ಮೋರೆ. ಒಡವೆ-ವಸ್ತ್ರ ಚೇಂಜ್ ಆದರೂ ಗಂಡ ಚೇಂಜ್ ಆಗೋಲ್ಲವಲ್ಲ’.

‘ನಾವು ಗಂಡಂದಿರು ಕಾಲಕಾಲಕ್ಕೆ ತಲೆ ಕೂದಲಿಗೆ ಡೈ ಹಚ್ಚಿಕೊಂಡು ಹೆಂಡ್ತಿ ಲೆವೆಲ್ಲಿಗೆ ಅಪ್‍ಡೇಟ್ ಆಗೊಲ್ಲ, ಅದೇ ನಮ್ಮ ವೀಕ್‍ನೆಸ್’.

‘ಚಿತ್ರನಟಿಯರು ಹೆಸರು ಚೇಂಜ್ ಮಾಡ್ಕೊಂಡು ಅದೃಷ್ಟ, ಅಂದ ಹೆಚ್ಚಿಸಿಕೊಳ್ತಾರೆ. ನಾನೂ ಲೇಟೆಸ್ಟ್ ಹೆಸರು ಇಟ್ಕೊಬೇಕು ರೀ’.

‘ಪ್ರಯೋಜನವಿಲ್ಲ, ಹೆಸರು ಬದಲಾದರೂ ಜನ್ಮದಿನಾಂಕ ಬದಲಾಗೊಲ್ಲ’.

‘ಛೇ! ಹೊಸ ವರ್ಷ ಬಂದಾಗಲೆಲ್ಲಾ ನಾವು ಹಳಬರಾಗುತ್ತೇವೇನೋ ಅನಿಸುತ್ತಿದೆ’ ಸುಮಿಗೆ ಆತಂಕ ಹೆಚ್ಚಾಯಿತು.

‘ಹೌದು, ಗಡಿಯಾರ ನಿಂತರೂ ಕಾಲ ನಿಲ್ಲದು. ಹೊಸ ಚಿಗುರು, ಹಳೆ ಬೇರು, ಹಳೆ ಗೋಡೆ, ಹೊಸ ಕ್ಯಾಲೆಂಡರ್ ರೀತಿ, ಹಳೆ ಮುಖಕ್ಕೆ ಹೊಸ ಮೇಕಪ್ ಬಳ್ಕೊಂಡು ನಾವು ರಿನ್ಯೂವಲ್ ಆಗಬೇಕಷ್ಟೇ’ ಅಂದ ಶಂಕ್ರಿ. ಕೇಳಿಸದವಳಂತೆ ಮೂತಿ ತಿರುವುತ್ತಾ ಒಳಕ್ಕೆ ಹೋದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT