ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇತಾಳನ ಪ್ರಶ್ನೆ

Last Updated 21 ಜನವರಿ 2020, 20:00 IST
ಅಕ್ಷರ ಗಾತ್ರ

ನಡುರಾತ್ರಿಯಲ್ಲಿ ವಿಕ್ರಮಾದಿತ್ಯನು ವಿಧಾನಸೌಧದ ಮಹಾವೃಕ್ಷವನ್ನೇರಿ ಬೇತಾಳನನ್ನು ಕೆಳಗಿಳಿಸಿ ಹೆಗಲಿಗೆ ಏರಿಸಿಕೊಂಡು ಮೌನವಾಗಿ ಹೊರಟನು. ಆವರೆಗೆ ಸುಮ್ಮನಿದ್ದ ಬೇತಾಳವು ಬಾಯಿ ತೆರೆದು ‘ಎಲೈ ರಾಜನ್, ನಮ್ಮ ರಾಜ್ಯದ ಸಿ.ಎಂ ಥರಾ ನೀನೆಷ್ಟು ದುಡಿದರೂ ಪ್ರತಿಫಲ ಸಿಗುತ್ತಿಲ್ಲವಲ್ಲಾ! ನಿನ್ನ ಮಾರ್ಗಾಯಾಸ ಪರಿಹಾರಕ್ಕಾಗಿ ಕಥೆಯೊಂದನ್ನು ಹೇಳುತ್ತೇನೆ ಕೇಳು’ ಎಂದು ಹೇಳಲು ಆರಂಭಿಸಿತು.

‘ರಾಜನ್, ಕರ್ನಾಟಕ ರಾಜ್ಯದಲ್ಲಿ ಧವಳಪ್ಪನೆಂಬ ಹುಟ್ಟು ಹೋರಾಟಗಾರನು ಮಾಯಾವಿಗಳ ಸಹಕಾರದಿಂದ ಕ್ಷಿಪ್ರಕ್ರಾಂತಿ ಮಾಡಿ ಕಮಲರಾಜ್ಯ ತಂದಿದ್ದೇನೋ ಆಯ್ತು. ಆದರೆ ಕೊಟ್ಟ ಮಾತಿನಂತೆ ಮಾಯಾವಿಗಳನ್ನು ಮಂತ್ರಿ ಮಾಡಲು ಭಗವಂತನಾದ ನಮೋ, ಶಾ ದೇವನ ಕೃಪೆಯಾಗದ ಕಾರಣ, ಸಂಪುಟ ಸಂಕಟದಲ್ಲಿದ್ದನು. ಇವುಗಳ ಜೊತೆಗೆ ಅತೃಪ್ತರ ಬಾಲಗ್ರಹ, ನೆರೆ ಪರಿಹಾರ, ಜಿಎಸ್‍ಟಿ ಅನುದಾನ ಕಂಟಕ, ಮಠಾಧೀಶರ ಶಾಪಾರಾಧನೆ, ಡಿಸಿಎಂ ಪ್ರೇತಿಪದ್ಯಗಳಲ್ಲಿ ಧವಳಪ್ಪ ನೊಂದು ಸಿಂಹಾಸನ ತೊರೆಯುವ ಮಾತನ್ನಾಡತೊಡಗಿದ್ದನು. ಉಗ್ರತಪಸ್ಸಿಗೂ ಜಗ್ಗದ ಭಗವಂತರು, ನಾಡಿಗೆ ಬಂದರೂ ವರ ಕೊಡಲಿಲ್ಲ! ರಾಜನ್, ಹಿಂಸತೂಲಿಕಾತಲ್ಪದಲ್ಲೇ ಬದುಕುತ್ತಿರುವ ಧವಳಪ್ಪನ ವ್ಯಥೆ ಕೇಳಿದೆಯಷ್ಟೇ! ಈಗ ನನ್ನ ಪ್ರಶ್ನೆಗಳಿಗೆ ಉತ್ತರಿಸು’ ಎಂದಿತು. ವಿಕ್ರಮಾದಿತ್ಯನು ತಲೆಯಾಡಿಸಿದನು.

‘ಎಲೈ ರಾಜನ್‌, ಛಲೋಪಾಸಕನಾದ ಧವಳಪ್ಪ ರಾಜನ ತಪ್ಪೇನು? ಸಂಪುಟ ವಿಸ್ತರಣೆ ಯಾವಾಗ? ಇವುಗಳಿಗೆ ಉತ್ತರ ಗೊತ್ತಿದ್ದರೂ ಹೇಳದೇ ಹೋದಲ್ಲಿ ನಿನ್ನ ತಲೆ ಆರ್ಟಿಕಲ್ 370ರಂತೆ ಸಿಡಿದು ಸಹಸ್ರ ಹೋಳಾಗುವುದು’ ಎಂದಿತು.

ರಾಜನು ಬೇತಾಳವನ್ನೊಮ್ಮೆ ನೋಡಿ ‘ಎಲೈ ಬುದ್ಧಿಗೇಡಿ ಬೇತಾಳವೇ, ಸಿರಿ ಸಂಪತ್ತಿಗಾಗಿ ಬಕಧ್ಯಾನ ಮಾಡುವ ಮಂತ್ರಿವಾದಿಗಳು ಮತ್ತು ಭುಕ್ತಿಮಾರ್ಗಿಗಳು ಇರುವವರೆಗೂ ನಕ್ಷತ್ರಿಕರ ಕಾಟ ತಪ್ಪದು! ಧವಳಪ್ಪನಿಗೆ ಒಂದೇ ದಾರಿ- ಮೌನಂ ಮುಂಡಿತ ಸಾಧನಂ’ ಎಂದ ಕೂಡಲೇ ‘ನಿನ್ನ ಮೌನವು ಮುರಿಯಿತಲ್ಲಾ!’ ಎಂದು ಗಹಗಹಿಸಿ ನಕ್ಕ ಬೇತಾಳವು ಹಾರಿ ಹೋಗಿ ಹುಣಿಸೆಮರಕ್ಕೆ ನೇತು ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT