ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊರಕೆ ಪುರಾಣ

Last Updated 16 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಪೊರಕೆಗಳು ಕಮಲದಳಗಳನ್ನು ಗುಡಿಸಿ ಕಸದಬುಟ್ಟಿಗೆಸೆದ ನಂತರ ಶಾಣ್ಯಾರ ಬಂಗಲೆಯಲ್ಲಿದ್ದ ಎಲ್ಲ ಪೊರಕೆಗಳು ಗುಟ್ಟಾಗಿ ಸಭೆ ಸೇರಿದವು. ತಮ್ಮ ಪ್ರತಿನಿಧಿಯೇ ಈ ಸಲವೂ ದೆಹಲಿ ಗದ್ದುಗೆಯೇರಿರುವುದರಿಂದ ತಮ್ಮನ್ನು ಇನ್ನು ಬಾಗಿಲ ಮೂಲೆಯಲ್ಲಿ ಇಡುವಂತಿಲ್ಲ, ಸೋಫಾದ ಮೇಲೆ ಇಡತಕ್ಕದ್ದೆಂದು ಹೇಳಬೇಕೆಂದು ನಿರ್ಧರಿಸಿ, ಭಾನುವಾರ ಪೊರಕೆ ಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ತೆರಳಿದವು.

ಶಾಣ್ಯಾರೇನು ಕಡಿಮೆಯೇ... ದೇಶದೆಲ್ಲೆಡೆ ನಡೆಯುವ ಇಂಥ ಗುಟ್ಟಿನ ಮಾತುಕತೆಗಳನ್ನು ಥಟ್ಟನೆ ಕೇಳಲೆಂದು ಮೈತುಂಬ ಮೈಕ್ರೋಚಿಪ್ಪು ಚುಚ್ಚಿಸಿಕೊಂಡಿದ್ದರು. ರಾಮಲೀಲಾ ಮೈದಾನದಿಂದ ಪೊರಕೆಗಳು ಬಂಗಲೆಗೆ ಮರಳುವಷ್ಟರಲ್ಲಿ ಇವುಗಳ ಜಾಗಕ್ಕೆ ಹೊಸ ವ್ಯಾಕ್ಯೂಮು ಕ್ಲೀನರುಗಳ (‘ಮೇಡ್ ಇನ್ ಚೈನಾ’ ಅಲ್ಲ, ‘ಮೇಕ್ ಇನ್ ಇಂಡಿಯಾ’ದ್ದು!) ನೇಮಕವಾಗಿ, ಎಲ್ಲ ದೇಸಿ ಪೊರಕೆಗಳನ್ನೂ ಗೇಟಿನಿಂದ ಹೊರಗಟ್ಟಲಾಯಿತು!

ಈ ನಡುವೆ ಪಾಪದ ಕಾಂಗಿಗಳು ಪೊರಕೆಗೆ ಹಸ್ತಲಾಘವ ನೀಡುವುದೋ ಅಥವಾ ತಮ್ಮ ಕೈಯಲ್ಲೇ ಹಿಡಿಯುವುದೋ ಗೊತ್ತಾಗದೆ ಅಯೋಮಯರಾಗಿದ್ದರು. ಇತ್ತ ಸ್ವಚ್ಛ ಭಾರತದ ಜಾಹೀರಾತುಗಳಿಗೆ ಕೋಟಿಗಟ್ಟಲೆ ಹಣ ಸುರಿದು, ಅಂದಚೆಂದದ ಪೊರಕೆ ಹಿಡಿದು ಫೋಟೊಗೆ ಪೋಸು ಕೊಟ್ಟಿದ್ದ ನಮೋಗುರುಗಳಿಗೆ ‘ಇದೇನಪ್ಪ, ಅವರ ಪೊರಕೆಯಿಂದ ನಮ್ಮನ್ನೇ ನಾವು ಗುಡಿಸಿದ್ದಾಯಿತಲ್ಲ. ಆ ಜಾಹೀರಾತು ನೋಡಿದವರು, ನನ್ನನ್ನು ಪೊರಕೆ ಪಕ್ಷದವ ಎಂದುಕೊಂಡು ಪೊರಕೆಗೇ ಮತ ನೀಡಿದರೇನೋ’ ಎಂದು ಭಯಂಕರ ಬೇಸರವಾಯಿತು.

ಟ್ರಂಪಣ್ಣನ ಸ್ವಾಗತಕ್ಕೆ ಅಹಮದಾಬಾದಿನಲ್ಲಿ ನಡೆಯುತ್ತಿರುವ ಸಿದ್ಧತೆ ನೋಡಲು ಹೊರಟ ಅವರು, ವಿಮಾನ ನಿಲ್ದಾಣದ ಹೊರಗೆ ಸ್ಲಂ ಕಾಣದಂತೆ ಮೇಲೇಳಿಸುತ್ತಿದ್ದ ಗೋಡೆಯನ್ನು ಇನ್ನಷ್ಟು ಎತ್ತರಿಸಲು ಸೂಚಿಸಿದರು. ಅಲ್ಲವೇ ಮತ್ತೆ... ದೊಡ್ಡಣ್ಣನ ಕಣ್ಣಿಗೆ ಕಿಸುರಾಗದಂತೆ ಏಕಭಾರತದ ಶ್ರೇಷ್ಠ ದೃಶ್ಯಗಳು ಮಾತ್ರ ಕಾಣಬೇಕಲ್ಲವೇ. ಇಂಥ ಸ್ಲಂಗಳನ್ನು ಶಾಶ್ವತವಾಗಿ ಗುಡಿಸಿಹಾಕಬಲ್ಲ ಎಲೆಕ್ಟ್ರಾನಿಕ್ ಪೊರಕೆ ಅಭಿವೃದ್ಧಿಪಡಿಸುವಂತೆ ಗೃಹ ಸಚಿವಾಲಯಕ್ಕೆ ಸೂಚಿಸ ಬೇಕೆಂದು ಘನಚಿಂತನೆಯಲ್ಲಿ ತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT