ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಲ್ಡ್‌ ರೆಕಾರ್ಡ್!

Last Updated 20 ಫೆಬ್ರುವರಿ 2020, 23:01 IST
ಅಕ್ಷರ ಗಾತ್ರ

ಹರಟೆಕಟ್ಟೆಯಲ್ಲಿ ಕಂಬಳದ ಬಗ್ಗೆ ಜೋರು ಚರ್ಚೆ ನಡೆದಿತ್ತು. ‘ಗುರೂ ಕಂಬಳದಲ್ಲಿ ಅದ್ಯಾರೋ ಒಬ್ಬ ಬೋಲ್ಟ್ ಅನ್ನೋನಿಗಿಂತ ಫಾಸ್ಟಾಗಿ ಓಡಿದ್ನಂತಲ್ಲ ನಿಜಾನಾ’ ಗುಡ್ಡೆ ಪ್ರಶ್ನಿಸಿದ.

‘ಹೌದು, ಯಾಕೆ ಡೌಟಾ?’

‘ಅಲ್ಲ, ಅವನೇ ಓಡಿದ್ನೋ ಅಥವಾ ಕೋಣ
ಗಳು ಅವನನ್ನ ಎಳ್ಕಂಡ್ ಹೋದ್ವೋ ಅಂತ...’

‘ನಿನ್ತಲೆ, ಬಾ ನಿನ್ನೂ ಕೋಣಗಳಿಗೆ ಕಟ್ತೀನಿ, ಅದೆಂಗೆ ಓಡ್ತೀಯೋ ಓಡಿ ತೋರ‍್ಸು’ ದುಬ್ಬೀರ ರೇಗಿದ.

‘ಅಲ್ಲ ಅವನಿಗೆ ಎಯ್ಟ್ ಪ್ಯಾಕ್ ಮೈಕಟ್ಟು ಇತ್ತಂತೆ? ಟಿ.ವಿ.ಯೋರು ತೋರಿಸ್ತಿದ್ರು. ನಮ್ಮ ಸಿನಿಮಾ ನಟರು ಸಿಕ್ಸ್ ಪ್ಯಾಕ್ ಮಾಡ್ಕಂಡಿರೋದನ್ನೇ ದೊಡ್ಡದಾಗಿ ಕೊಚ್ಕೋತಾರೆ ಅಲ್ವ?’

ತೆಪರೇಸಿ ಮಾತಿಗೆ ನಕ್ಕ ಗುಡ್ಡೆ, ‘ಯಾರ್‍ದು ಎಷ್ಟಾದ್ರೂ ಇರ‍್ಲಿ, ನಮ್ಮ ದುಬ್ಬೀರಂದು ಮಾತ್ರ ಯಾವಾಗ್ಲೂ ತ್ರೀ ಪ್ಯಾಕ್’ ಎಂದ.

‘ತ್ರೀ ಪ್ಯಾಕಾ? ಅಂದ್ರೆ?’

‘ಇಸ್ಪೀಟ್ ಕಣಲೆ, ದುಬ್ಬೀರ ಇಸ್ಪೀಟ್ ಗಿರಾಕಿ!’ ಗುಡ್ಡೆ ಕಾಲೆಳೆದಾಗ ಎಲ್ಲರೂ ಗೊಳ್ಳಂತ ನಕ್ಕರು.

ದುಬ್ಬೀರನಿಗೆ ಅವಮಾನವಾಯಿತು. ‘ನಂದೇನೋ ತ್ರೀ ಪ್ಯಾಕ್ ಒಪ್ಕಂತೀನಿ. ಆದ್ರೆ ಗುಡ್ಡೇದು ವರ್ಲ್ಡ್‌ ರೆಕಾರ್ಡ್ ನಿಮಗೆ ಗೊತ್ತಾ?’ ಎಂದ.

‘ವರ್ಲ್ಡ್‌ ರೆಕಾರ್ಡಾ? ಏನಪ್ಪ ಅದು?’ ತೆಪರೇಸಿಗೆ ಕುತೂಹಲ.

‘ಆ ಉಸೇನ್ ಬೋಲ್ಟು, ನಮ್ಮ ಕಂಬಳದ ವೀರ ಎಲ್ಲರ ರೆಕಾರ್ಡ್‌ನ ಈ ಗುಡ್ಡೆ ಮುರಿದು ಮೊನ್ನೆ ರಾತ್ರಿ ವರ್ಲ್ಡ್‌ ರೆಕಾರ್ಡ್ ಮಾಡಿದಾನೆ... ಐದು ನಿಮಿಷದಲ್ಲಿ ಮೂರು ಕಿಲೊ ಮೀಟರ್ ಓಡಿದಾನೆ...’

‘ಹೌದಾ? ಎಲ್ಲಿ? ಯಾವಾಗ?’

‘ಮೊನ್ನೆ ರಾತ್ರಿ ಗುಂಡು ಹಾಕಿ ಹೆಂಡ್ತಿಗೆ ಹೊಡೆಯೋಕೆ ಹೋಗಿದ್ನಂತೆ. ಅವಳು ಕಸಬರಿಗೆ ತಗಂಡು ಬೆನ್ನತ್ತಿದ್ಲಂತೆ ನೋಡು, ‘ಕಾಪಾಡಿ...’ ಅಂತ ಓಡೋಕೆ ಶುರು ಮಾಡಿದೋನು ಐದೇ ನಿಮಿಷದಲ್ಲಿ ಮೂರು ಕಿಲೊಮೀಟರ್ ದಾಟಿ ಪೊಲೀಸ್ ಸ್ಟೇಷನ್ ಸೇರ್ಕಂಡಿದ್ನಂತೆ’ ದುಬ್ಬೀರನ ತಿರುಗೇಟಿಗೆ ಹರಟೆಕಟ್ಟೆಯು ನಗೆಯ ಅಲೆಯಲ್ಲಿ ತೇಲಿ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT