ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನವೇ ಮನೋಬಲ!

Last Updated 1 ಏಪ್ರಿಲ್ 2020, 19:32 IST
ಅಕ್ಷರ ಗಾತ್ರ

‘ತಂದು ಹಾಕಿದ್ರೆ ಎಲ್ರೂ ಮಾಡಿ ಹಾಕ್ತಾರೆ... ಹೊರಗೆ ಹೋಗಿ ದುಡಿದ್ರೆ ಕಷ್ಟ ಏನು ಅನ್ನೋದು ಗೊತ್ತಾಗುತ್ತೆ ಅಂತ ಪದೇ ಪದೇ ಅಂತಿದ್ರಿ, ಈಗ ನೋಡಿದ್ರೆ ನೀವು ಹೊರಗೆ ಹೋಗ್ತಾನೂ ಇಲ್ಲ, ತಂದು ಹಾಕ್ತಾನೂ ಇಲ್ವಲ್ಲ’ ಕಿಚಾಯಿಸುವ ಧ್ವನಿಯಲ್ಲಿ ಹೇಳಿದಳು ಹೆಂಡ್ತಿ.

‘ಪಾಸ್ಟ್ ಈಸ್ ಪಾಸ್ಟ್. ಅದೆಲ್ಲ ಯಾಕೀಗ?ಈಗೇನು..‌. ಮನೆ ಒರೆಸ್ಲಾ, ಪಾತ್ರೆ ತಿಕ್ಲಾ, ಕಸ ಗುಡಿಸ್ಲಾ ಹೇಳು’ ಪೂರ್ಣ ಶರಣಾಗತಿ ದನಿಯಲ್ಲಿ ಕೇಳ್ದೆ.

‘ಅದೆಲ್ಲ ಏನ್ ಬೇಡ... ಬೈಕ್‌ನಲ್ಲಿ ಹೋಗಿ ಪಕ್ಕದ ಮಾರ್ಕೆಟ್‌ನಿಂದ ತರಕಾರಿ, ಸೊಪ್ಪು ತನ್ನಿ ಸಾಕು...’ ಆರ್ಡರ್ ಮಾಡಿದರು ಹೋಂ‌‌ ಮಿನಿಸ್ಟರ್.

‘ಓಕೆ. ನೀನೂ ಬಾ... ಬೈಕ್‌ನಲ್ಲಿ ಹಿಂದೆ ಕೂತ್ಕೋ...’ ಎಂದೆ. ನನ್ನ ಮಾತಿ‌ನ ಹಿಂದಿರುವ ಹುನ್ನಾರ ಹೆಂಡ್ತಿಗೆ ಅರ್ಥವಾಯಿತು‌.

‘ಆಯ್ತು... ಅಡುಗೇನೇ ಮಾಡಲ್ಲ... ಆನ್‌ಲೈನ್‌ನಲ್ಲೇ ಬುಕ್ ಮಾಡಿ ತರಿಸ್ಕೊಳ್ತಿದ್ರಲ್ಲ... ತರಿಸ್ಕೊಂಡು ತಿನ್ನಿ...’

‘ಇಲ್ಲಿರೋದಕ್ಕಿಂತ ಹಳ್ಳಿಗಾದರೂ ಹೋಗಿದ್ರೆ ನೆಮ್ಮದಿಯಾಗಿರಬಹುದಿತ್ತು...’ ಗೊಣಗಿದೆ.

‘ಈಗ ನಿಮಗೆ ಹಳ್ಳಿ ನೆನಪಾಯ್ತಾ.. ಮಾತೆತ್ತಿದ್ರೆ ಫಾರಿನ್‌ಗೆ ಹೋಗ್ತೀನಿ ಅಂತಿದ್ರಿ... ಇದೇ ಪರಿಸ್ಥಿತಿ ಉಲ್ಟಾ ಆಗಿ, ಹಳ್ಳಿಯಲ್ಲಿರೋರೆಲ್ಲ ಸಿಟಿಗೆ ಬಂದು ಉಳ್ಕೊಂಡಿದ್ರೆ ನೀವೆಲ್ಲ ಎಷ್ಟು ಮಾತಾಡ್ತಿದ್ರಿ...‌ ಮುಂದೊಮ್ಮೆ ಎಲ್ಲರಿಗೂ ಹಳ್ಳೀನೇ ಗತಿ. ತಿಳ್ಕೊಳ್ಳಿ...’

‘ಸ್ಕೂಲ್ ರಜೆ ಅಂತ ನಂಗೇನೇ ಪಾಠ ಮಾಡ್ತಿದೀಯಲ್ಲ ಮಾರಾಯ್ತಿ...‌ ತಪ್ಪಾಯ್ತುಬಿಡು’ ಎನ್ನುತ್ತಾ ಕೈಗಳನ್ನು ಕ್ಲೀನಾಗಿ ತೊಳ್ಕೊಂಡು, ಮಾಸ್ಕ್ ಹಾಕ್ಕೊಂಡು ಕೂತೆ.

‘ಹೀಗೆ ಯಾವಾಗಲೂ ಮಾಸ್ಕ್ ಹಾಕ್ಕೊಂಡಿದ್ರೆ ಉಸಿರು ಕಟ್ಟುತ್ತೆ. ಕೊರೊನಾನ ಓಡಿಸಬೇಕೆಂದರೆ ಮನೋಸ್ಥೈರ್ಯ ಗಟ್ಟಿಯಾಗಿದ್ರೆ ಸಾಕು ರೀ...’ ಪಾಠ ಮುಂದುವರಿಯಿತು.

‘ಹೀಗೆ ಹೇಳಿ ಹೇಳಿಯೇ ನನ್ನ ಮನೋಸ್ಥೈರ್ಯ ಹಾಳು ಮಾಡ್ತಿದೀಯಲ್ಲ... ನೀನು ಸ್ವಲ್ಪ ಸುಮ್ನಿದ್ದು ಬಿಡು ತಾಯಿ. ನಿನ್ನ ಮೌನವೇ ನನ್ನ ಮನೋಬಲ’ ಎಂದೆ.

ಅಡುಗೆ ಮನೆಯಿಂದ ಹೊರಬರುತ್ತಿದ್ದ ಬೋಂಡಾ, ಬಜ್ಜಿಯೂ ಒಳಗೆ ಹೋಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT