ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾಕ್ ಐತಾ?

Last Updated 2 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಮನೆಯಲ್ಲಿ ‘ಅದೇನೋ’ ಸುಟ್ಟ ಬೆಕ್ಕಿನಂತೆ ಒಂದೇ ಸಮನೆ ಅತ್ತಿಂದಿತ್ತ ಓಡಾಡುತ್ತಿದ್ದ ತೆಪರೇಸಿ, ಸಂಜೆಯಾಗುತ್ತಿದ್ದಂತೆ ದುಬ್ಬೀರನಿಗೆ ಫೋನ್ ಮಾಡಿ ಕೇಳಿದ ‘ಲೋ ಮಗಾ, ಏನಾರ ಸ್ಟಾಕ್ ಇಟ್ಟಿದೀಯ?’

‘ಇವತ್ತಿಗೆ ನಂಗೊಬ್ಬಂಗೆ ಆಗಬಹುದು ಕಣಲೆ. ಯಾಕೆ ನೀನು ಸ್ಟಾಕ್ ಮಾಡ್ಕಂಡಿಲ್ವ?’

‘ಇಲ್ಲ ಮಗಾ ಮರೆತುಬಿಟ್ಟೆ, ಓಕೆ ಆಮೇಲೆ ಮಾಡ್ತೀನಿ ಇರು’ ಎಂದ ತೆಪರೇಸಿ, ಗುಡ್ಡೆಗೆ ಫೋನ್ ಹಾಕಿದ. ಮೊದ್ಲು ಕೊರೊನಾ ವೈರಸ್ ಕೆಮ್ಮಿದ ಮೇಲೆ ರಿಂಗ್ ಟೋನ್ ಶುರುವಾಯಿತು ‘ಗುಂಡಿನ ಮತ್ತೇ ಗಮ್ಮತ್ತು...’ ತೆಪರೇಸಿ ತಾಳ್ಮೆ ಕಳೆದುಕೊಳ್ಳೋ ಅಷ್ಟರಲ್ಲಿ ಗುಡ್ಡೆ ಫೋನ್ ಎತ್ತಿದ. ‘ಏನೋ ತೆಪರಾ? ಏನ್ಸಮಾಚಾರ?’

‘ಏನಿಲ್ಲ ಕಣಲೆ, ಏನರ ಸ್ಟಾಕ್ ಐತಾ?’

‘ಥೂ ನಿನ್ನ, ನಾನ್ಯಾವತ್ತು ಸ್ಟಾಕ್ ಇಟ್ಟಿದ್ದೆ ಹೇಳಲೆ, ಮನೇಲಿ ತಗಂಡ್ರೆ ಸುಮ್ನೆ ಬಿಡ್ತಾರಾ? ನೀನೊಬ್ಬ...’ ನಕ್ಕ ಗುಡ್ಡೆ.

ನಿರಾಶನಾದ ತೆಪರೇಸಿ, ಪರ್ಮೇಶಿಗೆ ಫೋನ್ ಮಾಡಿದ. ‘ಮಗಾ, ಏನ್ ಮಾಡ್ತಿದೀಯ?’

‘ತಗಂತಿದೀನಿ, ಯಾಕೆ?’

‘ಅಯ್ಯೋ ಹೌದಾ? ಸ್ಟಾಕ್ ಐತಾ?’

ಆ ಕಡೆಯಿಂದ ಉತ್ತರ ಬರೋ ಅಷ್ಟರಲ್ಲಿ ತೆಪರೇಸಿ ಹೆಂಡ್ತಿ ಕೇಳಿದಳು ‘ರೀ... ಊಟ ಹಾಕ್ಕೊಡ್ಲಾ?’

‘ಲೇಯ್ ಸ್ವಲ್ಪ ತಡ್ಕಳೆ’ ರೇಗಿದ ತೆಪರೇಸಿಯು ಪರ್ಮೇಶಿಗೆ ‘ಪರ್ಮಿ, ಸ್ಟಾಕ್ ಐತೇನೋ’ ವಿಚಾರಿಸಿದ. ‘ಐತೆ, ಜಾಸ್ತಿನೇ ತಂದು ಇಟ್ಕಂಡಿದ್ದೆ, ಬೇಕಾ? ಇಲ್ಲೇ ಬಂದು ತಗಂತೀಯ ಅಥ್ವಾ...’

‘ಅಲ್ಲಿಗೆ ಹೆಂಗಲೆ ಬರೋದು, ಹೊರಕ್ಕೆ ಕಾಲಿಟ್ರೆ ಪೊಲೀಸ್ರು ಒದೀತಾರೆ...’ ತೆಪರೇಸಿಗೆ ಒದ್ದಾಟ ಶುರುವಾಯಿತು.

‘ನೋಡಪ್ಪಾ, ನಮ್ಮನೆಗೂ ನಿಮ್ಮನೆಗೂ ಆರು ಕಿಲೊಮೀಟರ್ ದೂರ. ನಾನಂತೂ ಬರೋ ಸ್ಥಿತೀಲಿ ಇಲ್ಲ. ನೀನು ಬರಂಗಿದ್ರೆ ಬೇಗ ಬಾ...’ ಪರ್ಮೇಶಿ ಫೋನ್ ಇಟ್ಟ. ತೆಪರೇಸಿ ಕಣ್ಣ ಮುಂದೆ ಪೊಲೀಸರ ಲಾಠಿ, ಪರ್ಮೇಶಿಯ ಗುಂಡು
ಕುಣಿಯತೊಡಗಿದವು.

ಅಷ್ಟರಲ್ಲಿ ತೆಪರೇಸಿ ಹೆಂಡ್ತಿ ಹಾಕಿದ ಟಿ.ವಿ.ಯಲ್ಲಿ ಹಾಡು ಶುರುವಾಯಿತು. ‘ಯಾರೋ ಯಾರೋ ಗೀಚಿ ಹೋದ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT