ಶನಿವಾರ, ಮೇ 30, 2020
27 °C

ನಿದ್ದೆ ಎಂಬ ಮದ್ದು

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

prajavani

‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ.

‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯೋಕ್ಕಾಗೋಲ್ಲ, ರಾತ್ರಿ ಕಣ್ಮುಚ್ಚಿದರೂ ನಿದ್ದೆ ಸುಳಿಯೋಲ್ಲ’ ಅತ್ತೆ ಗೊಣಗಿದರು.

‘ಒಂದು ತುತ್ತು ಊಟ ಕಡಿಮೆ ಮಾಡಿದರೆ ಕಣ್ಣೆಳೆಯಲ್ಲವೇನೋ’ ನನ್ನ ಪರ್ಮಿಷನ್ ಕೇಳದೆ ನಾಲಿಗೆ ಒದರಿತ್ತು.

‘ಕರೆಂಟು ರಾತ್ರಿಯತನಕ ಬರೋಲ್ವಂತೆ, ಇಡ್ಲಿಗೆ ನೆನೆಸಿದ್ದೀನಿ, ಒರಳು ತೊಳೆದಿಟ್ಟಿದ್ದೀನಿ’ ನನ್ನವಳ ಮಾತಿನ ಬಾಣ ನನ್ನತ್ತ ನೇರವಾಗಿ ಬಂದು ಬಿತ್ತು. ಪುಟ್ಟಿ, ಕಿಸಕ್ಕನೆ ನಕ್ಕಳು.

‘ನಿದ್ದೇನೇ ಒಳ್ಳೆಯ ಮದ್ದು, ಆದರೆ ಬೇಕು ಅಂದಾಗ ಬರೋಲ್ಲ... ಬೇಡವೆಂದಾಗ ಕಣ್ಣೆಳೆಯುತ್ತೆ. ಎಲ್ಲಕ್ಕೂ ಯೋಗ ಬೇಕು’ ಮತ್ತೆ ಸುದ್ದಿಯತ್ತ ಎಲ್ಲರ ಚಿತ್ತ ತಿರುಗಿಸಿದೆ.

‘ಅಪ್ಪಾ, ಆ ವಿಷಯಕ್ಕೆ ಬಂದರೆ ಕಂಠಿ ಅಂಕಲ್ ಯೋಗಿ ಅಲ್ವಾ?’ ಪುಟ್ಟಿಯ ಸಮಯೋಚಿತ ನೆನಕೆ.

‘ಹೌದು ಪುಟ್ಟಿ, ಭಲೇ ಅದೃಷ್ಟವಂತ ಅವನು, ನೆನೆದಾಗ ಕುಳಿತಲ್ಲೇ ತೂಕಡಿಸ್ತಾನೆ’ ಎಂದೆ.

‘ಅವರಲ್ಲಿ ನೀವು ಯಾಕೆ ಸಲಹೆ ಕೇಳಬಾರದು?’ ಅತ್ತೆಯ ಮನವಿ.

‘ಅದಕ್ಕೇನಂತೆ ಈಗ್ಲೇ ಮಾಡ್ತೀನಿ’ ಎಂದು ಅವನ ನಂಬರ್ ಒತ್ತಿದೆ. ಬಿಜಿ...ಬಿಜಿ 
ನನ್ನವಳ ಮುಖ ಸಪ್ಪಗಾಯಿತು.

ಛಲಬಿಡದ ತ್ರಿವಿಕ್ರಮನಂತೆ ಪ್ರಯತ್ನಿಸಿದೆ. ಕೊನೆಗೂ ಲೈನಿಗೆ ಬಂದ. ‘ಹಗಲಲ್ಲಿ ನಿದ್ದೆ ಬಾರದಿರಲು ನಿಮಗಿಷ್ಟವಾದ ಸಿನಿಮಾನೋ ಸೀರಿಯಲ್ಲೋ ಒಂದರ ಹಿಂದೊಂದು ನೋಡುತ್ತಲೇ ಇರಿ, ನಿದ್ದೆಯಿಂದ ದೂರವಿರಿ. ರಾತ್ರಿ ನಿದ್ದೆಬರಲು ನಿಮಗೆ ಹಿಡಿಸದ ಪುಸ್ತಕದ ಮೇಲೆ ಕಣ್ಣಾಡಿಸಿ, ಕೆಲವೇ ಸೆಕೆಂಡುಗಳಲ್ಲಿ ಗೊರಕೆ ಹೊಡೆಯದಿದ್ದರೆ ಕೇಳಿ’ ಎಂದು ಆಕಳಿಸುತ್ತಾ ಕರೆ ಮುಗಿಸಿದ.

‘ಸಲಹೆ ಕೊಟ್ರಾ’ ನನ್ನವಳ ಕುತೂಹಲ. ‘ಹ್ಞೂಂ ಸುಲಭ, ಕಷ್ಟವೇನಲ್ಲ’ ಎಂದೆ.

‘ಕರೆಂಟ್ ಬಂದಾಗ ರುಬ್ಬಿಕೊಂಡರಾಯ್ತು, ನಿಧಾನವಾದಷ್ಟೂ ಚೆನ್ನಾಗಿ ನೆನೆದಿರುತ್ತೆ’ ಅತ್ತೆ ನನ್ನ ಪರ ನಿಂತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.