ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಅಂತರವಲಯ ವಿವಾಹ

Last Updated 5 ಮೇ 2020, 20:00 IST
ಅಕ್ಷರ ಗಾತ್ರ

ರೆಡ್ ಝೋನ್ ವರನಿಗೂ ಗ್ರೀನ್ ಝೋನ್ ವಧುವಿಗೂ ಮದುವೆ ಫಿಕ್ಸ್ ಆಗಿತ್ತು. ಲಾಕ್‍ಡೌನ್ ಬಿಡುವಿನಲ್ಲಿ ಇಬ್ಬರ ನಡುವೆ ಆನ್‍ಲೈನ್‍ನಲ್ಲಿ ಶುರುವಾದ ಪ್ರೀತಿ ಮದುವೆವರೆಗೂ ಬಂದಿತ್ತು.

ಆರಂಭದಲ್ಲಿ ವಧುವಿನ ಪೋಷಕರು ಮದುವೆಗೆ ಒಪ್ಪಲಿಲ್ಲ. ಅಂತರ್ಜಾತಿಯಾದರೂ ಪರವಾಗಿಲ್ಲ, ಅಂತರವಲಯ ಮದುವೆಗೆ ಒಪ್ಪುವುದಿಲ್ಲ, ಅದರಲ್ಲೂ ರೆಡ್ ಝೋನ್‍ಗೆ ನಮ್ಮ ಮಗಳನ್ನು ಕೊಡುವುದಿಲ್ಲ ಎಂದು ತಕರಾರು ಮಾಡಿದ್ದರು.

ಹಿರಿಯರು ಮಧ್ಯ ಪ್ರವೇಶಿಸಿ, ಗ್ರೀನ್ ಝೋನ್, ರೆಡ್ ಝೋನ್, ಆರೆಂಜ್ ಝೋನ್ ಶಾಶ್ವತವಲ್ಲ, ಯಾವ ಟೈಮಿನಲ್ಲಾದರೂ ಬಣ್ಣ ಬದಲಾಗಬಹುದು, ನಿಮ್ಮ ಗ್ರೀನ್ ಝೋನ್ ಮುಂದೆ ರೆಡ್ ಝೋನ್ ಆಗಿಬಿಟ್ಟರೆ ನಿಮ್ಮ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂದು ಪೋಷಕರ ಮನವೊಲಿಸಿ ಮದುವೆಗೆ ಒಪ್ಪಿಸಿದ್ದರು.

ತಜ್ಞ ಜ್ಯೋತಿಷಿಗಳು ಹುಡುಗ, ಹುಡುಗಿಯ ಜಾತಕ, ದ್ಯೋತಕವನ್ನು ಎಣಿಸಿ, ಗುಣಿಸಿ ಕಂಕಣಬಲ ಕೂಡಿಸಿದರು.

ರೆಡ್ ಝೋನ್ ವರನ ಕಡೆಯವರು ಕಡ್ಡಾಯವಾಗಿ ಕೊರೊನಾ ಸೋಂಕು ತಪಾಸಣೆ ಮಾಡಿಸಿಕೊಂಡು, ವೈದ್ಯರು ನೀಡುವ ನೆಗೆಟಿವ್ ವರದಿ ಕೊಡಬೇಕು ಎಂದು ಹೆಣ್ಣು ಹೆತ್ತವರು ಕಂಡೀಷನ್ ಹಾಕಿದರು. ಹುಡುಗಿ ಮನೆಯವರು ಒಡವೆ-ವಸ್ತ್ರದ ಜೊತೆಗೆ ವಧು–ವರರಿಗೆ ತಲಾ ನಾಲ್ಕು ರೇಷ್ಮೆ ಮಾಸ್ಕ್ ಕೊಡಬೇಕು ಎಂದು ವರನ ಕಡೆಯವರು ಬೇಡಿಕೆ ಇಟ್ಟರು. ಲಾಕ್‍ಡೌನ್ ನಡುವೆ ಕೊರೊನಾ ಕಾನೂನು ಪಾಲಿಸಿಕೊಂಡು ಮದುವೆ ನಡೆಸಲು ಗುರುಹಿರಿಯರು ನಿಶ್ಚಯಿಸಿದರು.

ವರ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ವಧುವಿಗೆ ಮಾಂಗಲ್ಯ ಕಟ್ಟಿದ. ಮಾಸ್ಕ್ ಮರೆಯಲ್ಲಿ ವಧು ಮುಖ ಅರಳಿಸಿ ನಕ್ಕಳು. ಎರಡೂ ಕಡೆಯ ಹನ್ನೆರಡು ಜನರ ಸಮ್ಮುಖದಲ್ಲಿ ಮದುವೆ ಅದ್ಧೂರಿಯಾಗಿ ನೆರವೇರಿತು.

ಒಬ್ಬರಿಗೊಬ್ಬರು ಅಂತರ ಕಾಪಾಡಿಕೊಂಡು ಮಕ್ಕಳು- ಮರಿ ಹೆತ್ತು, ನೂರುಕಾಲ ಸುಖವಾಗಿ ಬಾಳಿ ಎಂದು ಹಿರಿಯರು ನವದಂಪತಿಗೆ ಮುಯ್ಯಿ ಕೊಟ್ಟು, ಆಶೀರ್ವಾದ ಮಾಡಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT