ಶುಕ್ರವಾರ, ಜೂನ್ 5, 2020
27 °C

ಚುರುಮುರಿ| ಕಷಾಯ ಪುರುಷ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಹಲೋ... ಇನ್‌ಸ್ಪೆಕ್ಟರ್ ಸಾಹೇಬ್ರಾ? ನಾನ್ಸಾ, ರಿಪೋಟ್ರು ತೆಪರೇಸಿ, ನಿಮ್ ಕೈ ಮುಗೀತೀನಿ ಏನಾದ್ರು ಮಾಡಿ ನನ್ನ ಕ್ವಾರಂಟೈನ್‍ಗೆ ಹಾಕ್‍ಬಿಡಿ ಸಾ...’

‘ಕ್ವಾರಂಟೈನ್‍ಗಾ? ಯಾಕ್ರೀ, ಏನಾತು? ಕೊರೊನಾ ಗಿರೊನಾ ಏನಾದ್ರೂ...’

‘ಅಯ್ಯೋ ಅದಕ್ಕಿಂತ ದೊಡ್ಡದು ನನ್ ಹೆಂಡ್ತಿಗೆ ಅಂಟಿಕೊಂಡ್‌ಬಿಟ್ಟಿದೆ ಸಾ,
ತಡ್ಯೋಕಾಗ್ತಿಲ್ಲ...’

‘ಹೌದಾ? ಏನ್ರಿ ಅದೂ?’

‘ಕಷಾಯದ ಕಾಯಿಲೆ ಸಾ, ಗಂಟೆಗೊಂದೊಂದ್ ಸಲ ಒಂದೊಂದ್ ತರದ ಕಷಾಯ ಮಾಡಿ ನಂಗೂ ಮಕ್ಕಳಿಗೂ ಕುಡಿಸ್ತಾಳೆ. ಶುಂಠಿ ಕಷಾಯ, ಚಕ್ಕೆ ಕಷಾಯ, ಮೆಣಸು, ಲವಂಗ, ಬೆಳ್ಳುಳ್ಳಿ, ಜೀರಿಗೆ, ವೀಳ್ಯದೆಲೆ, ತುಳಸಿ, ನಾರು-ಬೇರು... ಹೊರಗೆ ರಣರಣ ಬಿಸಿಲು, ಒಳಗೆ ಈ ಬೆಂಕಿ ಕಷಾಯಗಳು. ಮೇಲೆ ಕೆಳಗೆಲ್ಲ ಭುಗು ಭುಗು, ಉರಿ ಕಿತ್ಕಂಬಿಟ್ಟಿದೆ ಸಾ...’

‘ಅರೆ, ಒಳ್ಳೆದಲ್ವೇನ್ರಿ? ಕೊರೊನಾಕ್ಕೆ ರಾಮಬಾಣ...’

‘ಬಾಣನೋ ಬಿಲ್ಲೋ, ಎರಡು ತಿಂಗಳಿಂದ ಕುಡಿದೂ ಕುಡಿದೂ ವಿಷಕನ್ಯೆಯರ ತರ ‘ಕಷಾಯ ಪುರುಷ’ರಾಗೋಗಿದೀವಿ ಸಾ. ಆಮೇಲೆ ಕ್ಲೀನಿಂಗೂ ಅಷ್ಟೆ. ಹಾಲು, ತರಕಾರಿ, ಚಪ್ಲಿ, ಮೊಬೈಲು, ಕೀಚೈನು ಎಲ್ಲ ಬಾಗಿಲ ಹೊರಗಿಟ್ಟು ಸ್ಯಾನಿಟೈಸರ್‌ನಿಂದ ತಿಕ್ಕಿ ತೊಳೆದು ಒಳಕ್ಕೆ ತರಬೇಕು. ನೋಟುಗಳನ್ನ ಒಂಬತ್ತು ಗಂಟೆ ಬಿಸಿಲಲ್ಲೇ ಒಣಗಾಕಬೇಕು. ನಾವು ಡೆಟ್ಟಾಲ್‍ನಿಂದ ಸ್ನಾನ ಮಾಡಬೇಕು, ಬಿಸಿನೀರಿಗೆ ನಿಂಬೆ ಹಣ್ಣು-ಉಪ್ಪು ಹಾಕಿ ಮೂಗು-ಬಾಯಿ ಮುಕ್ಕಳಿಸಬೇಕು, ಗಂಟೆಗೊಂದ್ ಸಲ ಉಜ್ಜಿ ಉಜ್ಜಿ ಕೈ ತೊಳ್ಕಾಬೇಕು. ಟೇಬಲ್ಲು, ಕುರ್ಚಿಗೆಲ್ಲ ಸ್ಯಾನಿಟೈಸರ್ ಹಚ್ತಾ ಇರಬೇಕು. ವಾಷಿಂಗ್ ಮಿಶಿನ್‍ಗೆ ಸೋಪ್ ಪೌಡರ್ ಜತಿಗೆ ಸ್ಯಾನಿಟೈಸರ್‍ನೂ ಹಾಕಿ ಬಟ್ಟೆ ಒಗೀತಾಳೆ. ಇಷ್ಟಾದ್ರೂ ನಾವು ಕ್ಲೀನ್ ಇಲ್ಲಂತೆ, ಏನ್ ಮಾಡ್ಲಿ?’

‘ಒಂದ್ ಕೆಲ್ಸ ಮಾಡಿ, ಅರ್ಧಗಂಟೆ ನಿಮ್ಮನ್ನೇ ವಾಷಿಂಗ್ ಮಿಶನ್‍ಗೆ ಹಾಕೋಕೇಳಿ ಅಥ್ವ ಕುಕ್ಕರ್‍ಗೇ ನಿಮ್ಮನ್ನ ಹಾಕಿ ಮೂರು ಸೀಟಿ ಹೊಡೆಸೋಕೆ ಹೇಳಿಬಿಡಿ, ಸ್ವಚ್ಛ ಆಗುತ್ತೆ...’ ಇನ್‌ಸ್ಪೆಕ್ಟರು ಫೋನಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು