ಗುರುವಾರ , ಆಗಸ್ಟ್ 5, 2021
28 °C

ಚುರುಮುರಿ | ಮಿನಿಮಂ ಗ್ಯಾರಂಟಿ

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

‘ಇನ್ನೇನು, ಎಕ್ಸಾಮ್ ನಡೆಯುತ್ತೆ ಅಂತಾಯ್ತಲ್ಲ, ಪುಸ್ತಕ ಹಿಡಿಬಾರ್ದಾ?’ ಸದಾ ಫ್ರೆಂಡ್ಸ್ ಜೊತೆ ಚಾಟ್‌ನಲ್ಲಿರುವ ಪುಟ್ಟಿಗೆ ಹೇಳಿದೆ.

‘ಆನ್‌ಲೈನ್ ಪರೀಕ್ಷೆ ಅನ್ನೋದಾದ್ರೆ ಅದಕ್ಕೂ ಪ್ರಿಪೇರ್ ಆಗಿರಬೇಕಲ್ಲ? ಅದನ್ನೇ ನಾವೆಲ್ಲ ಡಿಸ್ಕಸ್ ಮಾಡ್ತಿದ್ದೀವಿ’ ಟ್ಯಾಬ್‌ನಿಂದ ತಲೆಯೆತ್ತದೇ ಉತ್ತರಿಸಿದಳು.

‘ನಿಮ್ಮಪ್ಪಂಗೆ ಸ್ಮಾರ್ಟ್ ಫೋನ್ ಆಪರೇಟ್ ಮಾಡೋಕ್ ಬರೋಲ್ಲ. ಅವರ ಫ್ರೆಂಡ್ಸೂ ಹಾಗೇ ಇದ್ದಾರೆ, ಟೂಜಿಯಿಂದ ಮುಂದಕ್ಕೆ ಹೋಗಿಲ್ಲ, ಅದಕ್ಕೇ ಜಲಸ್ಸು’ ನನ್ನವಳು ಕಿಸಕ್ಕನೆ ನಕ್ಕಳು. ನಾನು ನಗಲಿಲ್ಲ, ಏಕೆಂದರೆ ಅದು ಫ್ಯಾಕ್ಟು.

‘ಅಪ್ಪಾ, ಬೇರೆ ರಾಜ್ಯಗಳಲ್ಲಿ ಹತ್ತನೇ ಕ್ಲಾಸ್‌ ಎಕ್ಸಾಮ್ ನಡೆಸದೇ ಪಾಸ್ ಮಾಡ್ತಾರಂತೆ. ನಮಗೂ ಪರೀಕ್ಷೆ ಬೇಡ. ಬರೀ ಕೋವಿಡ್, ಕ್ವಾರಂಟೈನು, ಮಾಸ್ಕು, ಸ್ಯಾನಿಟೈಸರ್ ಇತ್ಯಾದಿಗಳಿಗೆ ಹೊರತು ತಲೇಲಿ ಬೇರೆ ಯಾವುದಕ್ಕೂ ಜಾಗವಿಲ್ಲ’ ಪುಟ್ಟಿಯ ದೂರದ ಆಸೆ.

‘ಮೊದಲಿಗೆಲ್ಲ ಹತ್ತನೇ ತರಗತಿ ಫೇಲ್ ಅನ್ನೋದೂ ಒಂದು ಕ್ವಾಲಿಫಿಕೇಷನ್. ಈ ವರ್ಷ ಎಸ್ಎಸ್ಎಲ್‌ಸಿ ಪಾಸ್ ಎಂಬ ಮಿನಿಮಂ ಗ್ಯಾರಂಟಿ ಆದ್ರೂ ಇರುತ್ತೆ’ ಅತ್ತೆಯ ಅನಿಸಿಕೆ.

ಅಷ್ಟರಲ್ಲೇ ಕಂಠಿ ಬಂದ, ಕೈಯಲ್ಲಿ ಲಾಡು, ಚೌಚೌ, ‘ನಿನ್ನೆ ಮುಂಜಿಗೆ ಗೈರಂತೆ? ಮಹಿಳಾ ಮಂಡಳಿಯ ಪ್ರೆಸಿಡೆಂಟ್ ನಿಮಗೆ ಕೊಡೋಕ್ಕೆ ಹೇಳಿದ್ರು’ ಎಂದ.

‘ನಮ್ಮ ಸದಸ್ಯರು ಓಲಾಗೆ ಖರ್ಚು ಹಾಕಿ ಕೊಂಡು ಹೋಗಿ ಬೆಳ್ಳಿ ಪಂಚಪಾತ್ರೆ, ಉದ್ಧರಣೆ ವಟುಗೆ ಕೊಟ್ಟರೆ, ಕನಿಷ್ಠ ಒಂದು ಮಾಸ್ಕ್ ಆದ್ರೂ ರಿಟರ್ನ್ ಗಿಫ್ಟ್ ಕೊಡಲಿಲ್ಲವಂತೆ. ಆದರೆ ತಾನು ಮಾತ್ರ ಕುಚ್ಚು, ಮುತ್ತುಗಳ ರೇಷ್ಮೆ ಮಾಸ್ಕ್ ಹಾಕ್ಕೊಂಡು ಮೆರೆದಳಂತೆ, ಸದ್ಯ ನಾನು ಹೋಗದ್ದೇ ಒಳ್ಳೆಯದಾಯಿತು’ ನನ್ನವಳು ಕಾರಿದಳು.

‘ನೀವು ಹೇಳೋದು ನಿಜ, ಇರೋ ಐವತ್ತು ಮಂದೀಲಿ ಎಷ್ಟು ಜನ ಗೆಳತಿಯರು ಇದ್ದಾರು? ಸೀರೇನೇ ಕೊಡಬಹುದಿತ್ತು. ಮಹಾ ಜುಗ್ಗು ನಿಮ್ಮ ಪ್ರೆಸಿಡೆಂಟು’ ಅಂದ ಕಂಠಿ.

‘ಕಾಫಿ ಬೆರೆಸಲಾ’ ಎಂದಳು ನನ್ನವಳು ಕಣ್ಣರಳಿಸುತ್ತ. ಕಂಠಿಯೊಂದಿಗೆ ನಾನೂ ಗೋಣಾಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.