ಶನಿವಾರ, ಜುಲೈ 31, 2021
25 °C

ಮನೆಯೇ ಮೊದಲ ಕಾಟಶಾಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮನೆಯೇ ಮೊದಲ ಪಾಠಶಾಲೆ. ಜನನಿ ತಾನೇ ಮೊದಲ ಗುರುವು. ಜನಕ ತಾನು ಶುನಕನಂತೆ. ಗಾಣವಿಲ್ಲ, ಎಣ್ಣೆಯಿಲ್ಲ. ಜಾನುವಾರ ಸುತ್ತಿ ಸುಳಿದು, ಕತ್ತಲಾಗಿ ಗೂಡು ಸೇರಿ, ಮೂಲೆಗೊರಗಿ ಮುದುಡಿಕೊಂಡು ಬದುಕುವಂತ ನಾಯಿಪಾಡ ಮನೆಯ ಮಾಲೀಕ’ ಎಂದು ಹಾಡುತ್ತ ಮಲ್ಲೇಶಿ ಒಳಗೆ ಬಂದ.

ಕನಸು ಹೀಗೆ ಬಿದ್ದಿತ್ತು, ಪೇಪರ್‌ನಲ್ಲಿ ಹಾಗೆ ಬಂದಿತ್ತು ಎನ್ನುತ್ತಾ, ತನಗೆ ಅನಿಸಿದ್ದನ್ನು ಹಾಡಿನ ರೂಪದಲ್ಲಿ ಪರೋಕ್ಷವಾಗಿ ಹೆಂಡತಿ ಮಲ್ಲಿಕಾಗೆ ಸೂಚ್ಯವಾಗಿಸುತ್ತಿದ್ದ.

ಮಲ್ಲಿಕಾ ‘ಇದೆಲ್ಲಾ ಕಥಿ, ಕವಿತಾ ನನ್ನಂತ್ಹೇಕ ಬ್ಯಾಡಾ. ಜ್ಯೂಮ್ ಯ್ಯಾಪ್‌ನ್ಯಾಗ್ ಮಕ್ಕಳ ಪಾಠ ಶುರುವಾಗೇತಿ. ಅದನ್ನ ಕೇಳಿಸಿಕೊಂಡು, ಅವ್ರೀಗೆ ಮತ್ತೊಮ್ಮೆ ತಿಳಿಸಿ ಹೇಳ್ರೀ. ಹೋಮ್‌ವರ್ಕ್ ಮಾಡ್ಸಿ ವ್ಯಾಟ್ಸಪ್ಪಿನ್ಯಾಗ್ ಹಾಕ್ರೀ’ ಎಂದಳು.

ಮೆಲ್ಲಗೆ ವಾಕಿಂಗ್ ಹೊರಡಲು ಅಣಿಯಾಗುತ್ತಿದ್ದ ಮಲ್ಲೇಶಿಗೆ ಫಜೀತಿಗಿಟ್ಟುಕೊಂಡಿತು. ‘ಅಲ್ಲ... ಆಫೀಸನ್ಯಾಗ ಕುಂತಕುಂತ ಮೈಕೈ ಬಿಗದೈತಿ...’ ಎನ್ನೂದರಾಗ… ‘ಆಫೀಸನ್ಯಾಗ ಕುಂತ ಯಾಕ್ ಕೆಲ್ಸಾ ಮಾಡ್ತೀರಿ. ಪ್ಯೂನ್ಸ್‌ಗೆ ಹಚ್ಚು ಕೆಲ್ಸಾ ನೀವಾ ಓಡ್ಯಾಡಿ ಮಾಡ್ರೀ. ಲಿಫ್ಟ್‌ ಬದ್ಲಿ ಮೆಟ್ಲಾ ಬಳ್ಸರೀ. ಅಂದ್ರ ಮೈಕೈ ಹಗರ ಅಕ್ಕೈತಿ, ಬೆವರು ಕಿತ್ಕೊಂಡ ಬರ್ತೈತಿ, ಹೊಟ್ಟಿ ಕರಗತೈತಿ’ ಎಂದು ಮಲ್ಲಿಕಾ ಪಾಠ ಮಾಡತೊಡಗಿದಳು.‌

‘ಅಲ್ಲ... ನಾನು ಕನ್ನಡ ಮೀಡಿಯಮ್. ಸಿಬಿಎಸ್‌ಇ ಇಂಗ್ಲಿಷ್ ತಿಳಿದುಲ್ಲಾ’ ಎಂದ ಮಲ್ಲೇಶಿ. ‘ಈಗ ಲಾಕ್‌ಡೌನ್ ಐತಿ. ಆಫೀಸನ್ಯಾಗ ಏನ್ ಕೆಲ್ಸಾ ಇರ್ತೈತಿ? ಹುಡ್ರ್ ಅಷ್ಟೂ ಬುಕ್ಸ್ ತುಗೊಂಡು ಹೋಗಿ ಆಫೀಸನ್ಯಾಗ ಓದಕೊಂಡ್ ಬರ‍್ರೀ ಇಂಗ್ಲಿಷ್ ಶಬ್ದ ತಿಳಿಲಿಲ್ಲಂದ್ರ ಗೂಗಲ್ ಟ್ರಾನ್ಸಲೇಟರ್‌ನ್ಯಾಗ ನೋಡ್ರೀ. ಸುಮ್ಮಸುಮ್ಮನ ಫೇಸ್‌ಬುಕ್ಕು, ವ್ಯಾಟ್ಸಪ್ಪು ತಿಕ್ಕೊಂತ, ಚಾಟಿಂಗ್ ಮಾಡ್ಕೋತ್ ಕುಂದ್ರಬ್ಯಾಡ್ರಿ. ಹತ್ತಸರೆ ಚಾ ಕುಡಿದು, ಗಾಸಿಪ್‌ ಮಾತಾಡ್ಕೋಂತ ಟೈಮ್ ಹಾಳ್ ಮಾಡಬ್ಯಾಡ್ರಿ’ ಎಂದು ಮಲ್ಲಿಕಾ ಮಾಲೆಯಂತೆ ಮಾತು ಪೋಣಿಸಿದಳು.

‘ಅಲ್ಲಾ... ಆಗಾಗ್ ನೀನ್ ಹೇಳ್ತಿದ್ದಿ, ಮಕ್ಳು ನಿಮ್ಮಂಗಾದ್ರ ಮುಗೀತು, ಅವೂ ಜಸ್ಟ್ 35 ಮಾರ್ಕ್ಸ್‌ ತುಗೋತಾವ್ ಅಂತ…’ ಅನ್ನುತ್ತಿ
ದ್ದಂತೆ, ಮಲ್ಲಿಕಾ ಬಿರುಗಣ್ಣು ಬಿಟ್ಟಳು. ಮಲ್ಲೇಶಿ ಮೆತ್ತಗೆ ‘ಮನೆಯೇ ಮೊದಲ ಕಾಟಶಾಲೆ…’ ಎಂದು ಗೊಣಗಿಕೊಳ್ಳುತ್ತಾ ಟಾಯ್‌ಲೆಟ್ ಒಳಹೊಕ್ಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.