ಮಂಗಳವಾರ, ಜನವರಿ 19, 2021
24 °C

ಚುರುಮುರಿ: ಕ್ಯಾಲೆಂಡರ್ ಕಥನ

ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

ಹಳ್ಳಿ ಮನೆ ಹೊಸ ಗೋಡೆ ಕ್ಯಾಲೆಂಡರ್ 2021: ‘ಏನಯ್ಯಾ, ಹಿಂಗೆ ಸಪ್ಪೆ ಮೋರೆ ಹಾಕ್ಕೊಂಡಿದೀಯಾ. ಹೇಗಿತ್ತು ಕಳೆದ ವರ್ಷ?’

ಹಳೆ ಕ್ಯಾಲೆಂಡರ್ 2020: ‘ಮೊನ್ನೆಗೇ ನನ್ನ ಅವಧಿ ಮುಗೀತು. ನಿಂಗೆ ಚಾರ್ಜ್ ಕೊಟ್ಟು ಹೋಗ್ತೀನಿ. ವರ್ಷ ಮುಗಿದ್ರೆ ಸಾಕಪ್ಪಾಂತ ಕಾಯ್ತಿದ್ದೆ’.

‘ಯಾಕೋ?’

‘ಮಿತಿಮೀರಿದ ಶತ್ರು ಕಾಟ’.

‘ಪಾಕಿಸ್ತಾನ, ಚೀನಾ ಹಳೇ ಶತ್ರುಗಳ ಕಾಟ ಇದ್ದದ್ದೇ. ಅದ್ರಲ್ಲೇನಿದೆ ಹೊಸದು?’

‘ಹಳೆ ವೈರಿಯ ಹೊಸ ವೈರಾಣುವಿನಿಂದ ಜಗತ್ತೇ ಹೈರಾಣಾಯ್ತಲ್ಲೋ...’

‘ಈಗದರ ಹಾವಳಿ ತಗ್ಗುತ್ತಾ ಇದೆ’.

‘ನಿನ್ನ ಕಾಲ್ದಲ್ಲಿ ಹೊಸ ಅವತಾರದಲ್ಲಿ ಬರ್ತಾ ಇದೆ, ಹುಷಾರು!’

‘ಆದ್ರೆ, ಅದನ್ನ ಮಟ್ಟ ಹಾಕೋಕೆ ತಯಾರಾ
ಗಿದೆಯಲ್ಲ ರಾಮಬಾಣ!’

‘ನೂರಾಮೂವ್ವತ್ತೆಂಟು ಕೋಟಿ ಜನ್ರಿಗೆ ಅದು ತಲುಪೋದು ಯಾವ ರಾಯನ ಕಾಲಕ್ಕೋ’.

‘ಇದೇನು ನಿನ್ನ ಮುಖದ ತುಂಬ ಇಷ್ಟೊಂದು ಹಣೆಬೊಟ್ಟುಗಳು!’

‘ಹೆಣ್ಮಕ್ಕಳು ಸ್ನಾನಕ್ಕೆ ಹೋಗುವಾಗ ಅಂಟಿಸಿದವು’.

‘ಮಗ್ಗುಲಲ್ಲಿರೋದು?’

‘ಹುಡುಗ್ರ ಕ್ರಿಕೆಟ್ ಮ್ಯಾಚ್ ಡೈರಿ!

‘ಮೈತುಂಬ ಅಂಕೆಗಳಿಗೆ ಗುಂಡು ಸುತ್ತಿರೋದು?’

‘ತಾತನ ಔಷಧಿಗಳ ಪ್ರಾರಂಭ, ಹುಣ್ಣಿಮೆ, ಅಮಾವಾಸ್ಯೆ, ಸಂಕಷ್ಟಿ ಗುರ್ತಿ‌ಸೋಕೆ’.

‘ಮೇಲೆಲ್ಲಾ ಅರಿಶಿನ ಕುಂಕುಮ, ಚುಚ್ಚಿದ ಸೂಜಿ ದಾರ!’

‘ನನ್ನಲ್ಲಿರೋ ದೇವರ ಚಿತ್ರಕ್ಕೆ ಅಜ್ಜಿಯ ಪೂಜೆ, ತಾತನ ಅಂಗಿಗೆ ಗುಂಡಿ ಹಾಕೋಕೆ ಕಣ್ಣೆದುರಿಗೆ ಸಲಕರಣೆಗಳು!’

‘ವರ್ಷದ ಮೊದ್ಲು ಜೊತೆಗೆ ಹನ್ನೊಂದು ಜನ ಇದ್ರು. ಈಗ ಏಕಾಂಗಿ! ಅವ್ರೆಲ್ಲಯ್ಯ?’

‘ಮಕ್ಕಳು, ಅಮ್ಮಾವ್ರು ಕಿತ್ಕೊಂಡೋದ್ರು. ಪುಸ್ತಕಕ್ಕೆ ರಟ್ಟು ಹಾಕ್ಕೊಳ್ಳೋಕೆ. ಸಣ್ಣ ಮಕ್ಳ...’

‘ಹ್ಹಹ್ಹ, ಛೀ ಛೀ...’

‘ನಗ್ಬೇಡಯ್ಯಾ, ನಿಂಗೂ ಕಾದಿರೋದು ಇದೇ ಸ್ಥಿತಿ! ...ಹೊಸ ವರ್ಷದ ಶುಭಾಶಯಗಳು. ನಾನಿನ್ನು ಬರ್ತೀನಿ’. ಹಳೆಯ ಕ್ಯಾಲೆಂಡರ್‌ ಹೇಳಿದ ಭವಿಷ್ಯ ನೆನೆದು ಹೊಸ ಕ್ಯಾಲೆಂಡರ್‌ ಸುಸ್ತು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.