ಭಾನುವಾರ, ಮಾರ್ಚ್ 7, 2021
31 °C

ಸೀಡಿ ಮಹಾತ್ಮೆ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಮನ್ನೆ ಗವಿಗಂಗಾಧರ ದೇವುಸ್ತಾನದಗೆ ಸೂರ್ಯನ ಬಿಸಿಲು ಶಿವಲಿಂಗು ಮುಟ್ಟಿಲ್ಲ, ಇದು ಅಪಶಕುನ, ಯುದ್ಧ ಗ್ಯಾರೆಂಟಿ ಅಂತ ಟೀವಿ ಚಾನಲ್ಲುಗಳು ರೋಸ್ತಾವಲ್ಲ ಸಾ!’ ಅಂತ ಹೇಳಿದೆ.

‘ಸೂರ್ಯನಿಗೆ ಮೋಡ ಮಾಸ್ಕ್ ಹಾಕಿದ್ರಿಂದ ದೂರದಿಂದಲೇ ಶಿವಲಿಂಗು ನೋಡಿ ಡಿಸ್ಟೆನ್ಸ್ ಮೆಂಟೇನು ಮಾಡಿಕ್ಯಂಡು ಹೋಗ್ಯದೆ. ಅಂದ್ರೆ ಇನ್ನೂ ಮಾಸ್ಕು, ಡಿಸ್ಟೆನ್ಸ್ ಇರಬೇಕು ಅಂತ ಅರ್ಥ ಕನೋ ಬಡ್ಡೆತ್ತುದೇ’ ತುರೇಮಣೆ ವಿವರಿಸಿದರು.

‘ಮನ್ನೆ ಶಾಣಕ್ಯರು ಬಂದಿದ್ರಲ್ಲಾ ರಾಜಾವುಲಿಗೆ ಭೇಷ್‍ಗಿರಿ ಕೊಟ್ಟರಂತೆ. ‘ಎಲ್ಲಾ ಸಾಸಕರೂ ಪಕ್ಸ ಬೆಳಸದು ನೋಡಿ. ನಿಮ್ಮದೇನಾದ್ರೂ ಚ್ವಾರೆ ಇದ್ರೆ ಊರಿಗೆ ಬನ್ನಿ’ ಅಂದ್ರಂತೆ ಸಾ! ನಾನೆಲ್ಲೋ ಸೀಡಿ ನೋಡಕೆ ಬಂದವರೆ ಅನಕಂಡಿದ್ದೆ’.

‘ನೋಡ್ಲಾ, ರಾಜಕೀಯದಗೆ ಸಾವಿರ ಸೀಡಿ ಬತ್ತವೆ ಹೋಯ್ತವೆ. ಯಾರೂ ಯಾವುದಕೂ ಮೈಂಡ್‌ ಮಾಡಿಲ್ಲ. ನಾನೂ ನೋಡಿದೀನಿ ತಗಳ್ಲಾ ಆ ಸೀಡಿಯ!’ ಅಂತ ಬ್ರೇಕಿಂಗ್ ನ್ಯೂಸ್ ಕೊಟ್ಟರು.

‘ಯತ್ನಾಳಣ್ಣ ಕಣ್ಣಿಂದ ನೋಡಕ್ಕಾಯ್ಕಿಲ್ಲ ಅಂದದೆ. ನೀವೇನು ನೋಡಿದ್ರೋ?’

‘ಪಾಪ, ರಾಜಾವುಲಿ ಪಡಿಪಾಟಲು ಕಣ್ಣಿಂದ ನೋಡಕ್ಕಾಯ್ಕಿಲ್ಲ ಕಲಾ. ರಾಜಾವುಲಿ ಕುರ್ಚಿಗೆ ಸಂಚಕಾರ ಅಂತ ಹುಲಿಯಾ ಬ್ಯಾರೆ ಪುಕಾರು ಹುಟ್ಟಿಸ್ತದೆ. ಅದೇ ಚಿಂತೇಲಿ ನಡುರಾತ್ರೀಲಿ ಮೆಲ್ಲಗೆದ್ದು ಗುಮಾನೀಲಿ ಕುರ್ಚಿ ಕಾಲು ಅಲ್ಲಾಡಿಸಿ, ಗಟ್ಟಿಯಾಗ್ಯದೆ ಅಂತ ಸಮಾದಾನದೇಲಿ ಪ್ರಿಜ್ ತಾಕೆ ಬಂದು ಗಟಗಟನೆ ನೀರು ಕುಡಿದುಬುಡತರೆ. ಸೀಯಾಗದಲ್ಲಾ ನೀರು ಅಂತ ನೋಡಿದ್ರೆ ಅದು ಸ್ಪ್ರೈಟು ಕನಾ ಮಗ. ‘ಛೇ ಸುಗರಿದ್ರೂ ಅಡ್ಡಗ್ಯಾನ್ದೇಲಿ ಸಕ್ಕರೆ ನೀರು ಕುಡಿದುಬುಟ್ಟೆನಲ್ಲಾ’ ಅಂತ ಬೇಜಾರಲ್ಲಿ ಹೋಗಿ ಕುರ್ಚಿ ಮ್ಯಾಲೇ ಮಕ್ಕತರೆ. ರಾಜಾವುಲಿ ಮೊಮ್ಮಗ ಇದ ಶೂಟಿಂಗ್ ಮಾಡಿದ್ನಾ, ಈ ಕತೆಗೆ ಅಪಾಪೋಲಿಗಳು ತಲೆಬಾಲ ಸೇರಿಸಿಗ್ಯಂಡವೆ’.

‘ರಾಜಾವುಲಿ ನಮಗೆ ಮಂತ್ರಿ ಹಿಸ್ಸೆ ಕೊಡ್ನಿಲ್ಲ ಅನ್ನೋ ಸಿಟ್ಟಿಗೆ ಸರೀಕರೇ ಮಡಗಿರಾ ಬಗನಿಗೂಟ ಇದು’ ಅಂತ ಯಂಟಪ್ಪಣ್ಣ ಸೀಡಿ ಮಹಾತ್ಮೆಗೆ ಅಂತ್ಯ ಹಾಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.