ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನ್‍ಗಾಗಿ ಆಂದೋಲನ

Last Updated 29 ಮಾರ್ಚ್ 2021, 19:30 IST
ಅಕ್ಷರ ಗಾತ್ರ

‘ಈ ಸಲಾನೂ ಪ್ರೊಮೋಷನ್ ಲಿಸ್ಟಲ್ಲಿ ನನ್ನ ಹೆಸ್ರು ಬರ‍್ಲಿಲ್ಲಾಂತ ಬೇಜಾರಾಗಿ ಆಫೀಸ್ಗೆ ಹೋಗ್ದೆ ಮನೇಲಿ ಕೂತಿದ್ದೆ. ಶಂಕ್ರ ಬಂದ. ವಿಷ್ಯ ತಿಳ್ದೋನೇ ‘ಇದ್ಕೆಲ್ಲಾ ವರಿ ಮಾಡ್ಕೋಬೇಡ. ನನ್ನ ಹೆಂಡ್ತೀಗೂ ಅವಳಾಫೀಸ್ನಲ್ಲಿ ಪ್ರಮೋಷನ್ ಸಿಕ್ಕಿರ್ಲಿಲ್ಲ. ಕೊನೆಗೆ ಟೀವಿಯಲ್ಲಿ ಜನ್ಮಾಂತರ ರಹಸ್ಯಗಳನ್ನು ಬಿಡಿಸೋ ಗುರೂಜೀನ ಭೇಟಿ ಮಾಡಿದ್ವಿ. ಹಿಂದಿನ ಜನ್ಮದಲ್ಲಿ ಅವ್ಳು ಮಾಡಿದ್ದ ಯಾವ್ದೋ ಪಾಪಾನ ಅವ್ರು ಹುಡ್ಕಿ ತಕ್ಕ ಪ್ರಾಯಶ್ಚಿತ್ತ ಮಾಡ್ಸಿದ್ರು. ಅದಾದ ಆರು ತಿಂಗ್ಳಿಗೇ ಅವ್ಳಿಗೆ ಪ್ರಮೋಷನ್ ಬಂತು’ ಎಂದ. ಸರಿ, ಒಂದು ಟ್ರಯಲ್ ಮಾಡ್ಬಿಡೋಣಾಂತ ಒಪ್ಕೊಂಡೆ.

ಅವ್ನೇ ಇನ್‍ಫ್ಲೂಯೆನ್ಸ್ ಮಾಡ್ಸಿ ಗುರೂಜಿಗಳ ಅಪಾಯಿಂಟ್‍ಮೆಂಟ್ ಕೊಡಿಸ್ದ. ಅವ್ರಿಗೆ ಪ್ರಾಬ್ಲಂ ಹೇಳ್ದೆ. ಫಸ್ಟ್‌ ರೌಂಡಲ್ಲಿ ನನ್ನ ಹಿಂದಿನ ಜನ್ಮಕ್ಕೆ ಅವ್ರು ಕರ್ಕೊಂಡೋದ್ರು. ಅಲ್ಲಿ ವಿಜ್ಞಾನಿ ಹೋಮಿ ಭಾಭಾ ಇದ್ರು. ‘ನಿಮ್ಮ ‘ಅಪ್ಸರಾ’ ನೋಡಿ ಪಿ.ಎಂ. ಖುಷಿ ಪಟ್ರು. ಮುಂದಿನ ಅಟಾಮಿಕ್ ರಿಯಾಕ್ಟರ್‌ನೂ ಅವರಿಂದಲೇ ಬಿಲ್ಡ್ ಮಾಡ್ಸೀಂದ್ರು’ ಅಂತ ಭಾಭಾ ನನ್ನ ಹೊಗಳಿದ್ರು.

‘ಹೋದ ಜನ್ಮದಲ್ಲಿ ಯಾವ ಪಾಪಾನೂ ಸಿಕ್ಲಿಲ್ಲ’ ಅಂದ್ರು ಗುರೂಜಿ. ನಿಮ್ಮ ಪಾಪಗಳನ್ನು ಹುಡುಕೋಕ್ಕೆ ಇನ್ನೂ ಒಂದು ಲೆವೆಲ್ ಹಿಂದೆ ಹೋಗಿ ನೋಡೋಣ’ ಅಂದ್ರು. ಹ್ಞೂಂ ಅಂದ್ಕೂಡ್ಲೇ ನಾನು ಟಾಟಾ ಇನ್‍ಸ್ಟಿಟ್ಯೂಟಲ್ಲಿದ್ದೆ. ಅಲ್ಲಿ ಬ್ರಿಟಿಷ್ ಪ್ರೊಫೆಸರ್‌ಗಳ ಕಾಟದಿಂದ ಬೇಜಾರಾಗಿ ರಾಜೀನಾಮೆ ಕೊಡೋಕ್ಕೆ ಸಿ.ವಿ.ರಾಮನ್ ಸಿದ್ಧರಾಗಿದ್ರು. ರಾಮನ್ ಬಿಟ್ಹೋಗ ಬಾರದೂಂತ ನಂದೇ ನಾಯಕತ್ವದಲ್ಲಿ ಆಂದೋಲನ ಶುರುವಾಯ್ತು. ನನಗೆ ಜೈಲಾಯ್ತು. ರಾಮನ್ ಅಲ್ಲೇ ಉಳಿದ್ರು.

ಗುರೂಜಿಗೆ ನಿರಾಸೆಯಾಯ್ತು. ಅದಕ್ಕೂ ಹಿಂದಿನ ಜನ್ಮಕ್ಕೆ ಹೋಗೋಣಾಂದ್ರು. ಈಗ ಬೇಡಾಂತ ಕೈಕಾಲು ಒದರ‍್ಕೊಂಡು ವಾಪಸಾದೆ.
‘ಹಿಂದಿನ ಜನ್ಮದಲ್ಲಿ ಕತ್ತೆಯಾಗಿದ್ರೀನ್ಸತ್ತೆ’ ಅಂತ ಹೆಂಡತಿ ಬೈದ್ಕೂಡ್ಲೇ ಎಚ್ಚರವಾಯ್ತು. ‘ನೆಮ್ಮದಿಯಾಗಿ ನಂಗೆ ನಿದ್ದೆ ಮಾಡೋಕ್ಕೂ ಬಿಡೋಲ್ವಲ್ರಿ. ಮುಂದಿನ ಜನ್ಮದಲ್ಲಿ ತಿಗಣೆಯಾಗಿ ಹುಟ್ತೀರಿ ನೀವು’ ಅಂದ್ಲು ಸೀರಿಯಸ್ಸಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT