ಗುರುವಾರ , ಮೇ 6, 2021
23 °C

ಚುರುಮುರಿ: ಸಿ.ಡಿ. ಸೋಂಕು

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ಶಾಸಕರ ಮನೆ ಮುಂದೆ ಜನ ಗುಂಪು ಸೇರಿದ್ದರು. ಶಾಸಕರ ಪಿ.ಎ ಬಂದು, ‘ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿ.ಎಂ ಜೊತೆ ಫೋನ್‍ನಲ್ಲಿ ಚರ್ಚೆ ಮಾಡಿದ್ದಾರೆ, ಶಾಂತಿಯಿಂದ ಸಹಕರಿಸಿ’ ಎಂದ.

‘ಕೊರೊನಾ ಕಾಟದಲ್ಲೂ ಏನಂತ್ರೀ ಇವರ ಗೋಳು...’ ಅಂತ ಗೊಣಗಿಕೊಂಡೇ ಬಂದ ಶಾಸಕರು, ‘ಏನ್ರೀ ನಿಮ್ಮ ಅಹವಾಲು?’ ಎಂದು ಕೇಳಿದರು.

‘ಊರಲ್ಲಿ ಕುಡಿಯಲು ನೀರಿಲ್ಲ, ನಡೆಯಲು ರೋಡಿಲ್ಲ, ಗುದ್ದಲಿ ಪೂಜೆ ಇಲ್ಲ, ಉದ್ಘಾಟನೆ ಇಲ್ಲ, ನೀವಂತೂ ಕ್ಷೇತ್ರದ ಕಡೆ ಬಂದು ನಮ್ಮ ಕಷ್ಟ ಏನೂಂತ ಕೇಳಲಿಲ್ಲ, ನಿಮ್ಮ ಕಷ್ಟ ಏನೂಂತ ಕೇಳಲು ನಾವೇ ಬಂದ್ವಿ...’ ಜನ ತಲೆಗೊಂದು ಮಾತನಾಡಿದರು.

‘ಸೋಂಕು ನಿವಾರಣೆ ಆಗಿ ಸರ್ಕಾರದ ಅನುದಾನ ಸಿಗೋವರೆಗೂ ಸಮಾಧಾನವಾಗಿರಿ’.

‘ಕೊರೊನಾ ಸೋಂಕಾ ಸಾರ್?’

‘ಅಲ್ಲ, ಸರ್ಕಾರಕ್ಕೆ ಸಿ.ಡಿ ಸೋಂಕು ಅಂಟಿದೆ. ದೊಡ್ಡ ಸೈಜಿನ ಮಾಸ್ಕ್ ಹಾಕ್ಕೊಂಡು ಮುಖ ಮುಚ್ಚಿಕೊಳ್ಳುವಷ್ಟು ಮುಜುಗರ ಆಗಿದೆ. ನೋವಿನಲ್ಲಿ ನರಳುತ್ತಿರುವ ಸರ್ಕಾರದ ಬಳಿ ಹೋಗಿ ಯೋಜನೆಗೆ ಅನುದಾನ ಬೇಕು, ಅಭಿವೃದ್ಧಿಗೆ ಹಣ ಬೇಕು ಅಂತ ಕೇಳೋದು ಮಾನವೀಯತೆ ಅಲ್ಲ’ ಅಂದರು ಶಾಸಕರು.

‘ಸಿ.ಡಿ ಸೋಂಕಿಗೆ ಲಸಿಕೆ ಇಲ್ವಾ ಸಾರ್...? ಒಳ್ಳೆಯ ಡಾಕ್ಟರ್‍ಗೆ ತೋರಿಸಿ ಟ್ರೀಟ್‍ಮೆಂಟ್ ಕೊಡಿಸಿ’.

‘ಇದು ಡಾಕ್ಟರ್ ಚಿಕಿತ್ಸೆಯ ಮೆಡಿಕಲ್ ವೈರಸ್ ಅಲ್ಲ, ಸಿ.ಡಿ ಸೋಂಕನ್ನು ಪೊಲೀಸರ ಟ್ರೀಟ್‍ಮೆಂಟ್‍ನಿಂದ ಬಗ್ಗು ಬಡಿಯಬೇಕು’.

‘ಸಿ.ಡಿ ಸೋಂಕಿನಿಂದ ಸರ್ಕಾರ ಬೇಗ ಗುಣಮುಖವಾಗಲಿ ಎಂದು ನಾವೆಲ್ಲಾ ಪ್ರಾರ್ಥಿಸುತ್ತೇವೆ...’ ಎಂದರು ಜನ.

‘ನಿಮ್ಮ ಪ್ರಾರ್ಥನೆ ಫಲದಿಂದ ಸೋಂಕು ನಿವಾರಣೆಯಾಗಿ ಸರ್ಕಾರ ಚೇತರಿಸಿಕೊಂಡ ಮೇಲೆ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡ್ತೀನಿ...’ ಎಂದರು ಶಾಸಕರು. ಅವರ ಭರವಸೆ ನಂಬಿ ಜನ ವಾಪಸಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.