ಗುರುವಾರ , ಮೇ 13, 2021
19 °C

ಚುರುಮುರಿ: ಕೊರಕೊರೋನ...

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಕೊರಕೊರೋನ ಕಳೆದರೂ ಕೊರೋನ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಕೊರೋನವ ಹೊಸತು ಹೊಸತು ತರುತಿದೇ... ಕೊರಕೊರೋ...’

‘ಏಯ್... ನಿಲ್ಸಲೆ, ಅದೇನ್ ಕೊರಕೊರ ಅಂತೀಯಲೆ, ನಿನ್ ಮಕ ನಾಯಿ ನೆಕ್ಕ, ಈಗಿನ್ನೂ ಹಬ್ಬ ಮಾಡಿ ಹೋಳಿಗಿ ತಿಂದು ಕುಂತಿದೀವಿ, ಬಂದ ಕೊರೊಕೊರ ಅನ್ಕೋತ...’ ತೆಪರೇಸಿ ಮೇಲೆ ದುಬ್ಬೀರ ರೇಗಿದ.

‘ಅದ್ಯಾಕಂಗೆ ಸಿಟ್ ಮಾಡ್ತೀಯಲೆ, ಕೊರೋನಾ ಅಬ್ಬರಿಸ್ತಾ ಐತಲ್ಲ ಅದ್ಕೆ ಹಂಗಂದ್ನೆಪ. ಹೋಗ್ಲಿ ಹಬ್ಬ ಜೋರಾತ? ಎಣ್ಣೆ ನೀರು, ಬೇವು ಬೆಲ್ಲ, ಹೋಳಿಗಿ ತುಪ್ಪ ಎಲ್ಲ ಮಸ್ತ್ ಆತು ಅನ್ರಿ...’ ತೆಪರೇಸಿ ವಿಚಾರಿಸಿದ.

‘ನಮ್ಮದೇನೋ ಎಣ್ಣೆ ನೀರು, ನಿಂದು ಎಣ್ಣೆಗೆ ನೀರಾ?’ ಗುಡ್ಡೆ ನಕ್ಕ.

‘ಈ ಸಲ ಚಂದ್ರ ಕಾಣ್ಲಿಲ್ಲ, ಏನೋ ಗಂಡಾಂತರ ಇರಬೇಕು ಅನುಸ್ತತಿ’ ಕೊಟ್ರೇಶಿ ಆತಂಕ ವ್ಯಕ್ತಪಡಿಸಿದ.

‘ಏನು? ಚಂದ್ರ ಕಾಣಿಸ್ಲಿಲ್ವ? ನಮ್ ಕಡಿ ಕಾಣ್ತಲ್ಲ...?’ ತೆಪರೇಸಿಗೆ ಆಶ್ಚರ್ಯ.

‘ಚಂದ್ರ ಕಂಡ್ನಾ? ನಿನಿಗೆ ಮೋಸ್ಟ್‌ಲೀ ಎರಡೆರಡು ಕಂಡಿರಬೇಕು...’ ದುಬ್ಬೀರನ ಕೀಟಲೆಗೆ ಎಲ್ಲರೂ ನಕ್ಕರು.

‘ಅದಿರ‍್ಲಿ, ಈ ಗಂಡಾಂತರ ಅಂದ್ಯಲ್ಲ ಕೊಟ್ರ, ಅದು ಗಂಡಾಂತರನೇ ಯಾಕೆ? ಹೆಂಡಾಂತರ ಅಂತ ಯಾಕಿಲ್ಲ?’ ತೆಪರೇಸಿ ಮಾತು ಬದಲಿಸಿದ.

‘ನಿನ್ನಂಥ ಗಂಡಂದಿರೇ ಜಾಸ್ತಿ ಕಂಟಕ ತರೋದ್ರಿಂದ ಗಂಡಾಂತರ ಅಂತ ಮಾಡಿರಬೇಕು’ ಕೊಟ್ರೇಶಿ ತನಗೆ ತಿಳಿದದ್ದು ಹೇಳಿದ.

‘ಯಾಕಲೆ ಹೆಂಡತೀರು ಕಂಟಕ ತರಲ್ವ? ಹೆಂಡತಿ ಅಂದ್ರೆ ಏನಂತ ತಿಳಿದಿದಿ? ಹೆಂಡ+ಅತಿ ಹೆಂಡತಿ ಅಂತ...’ ತೆಪರೇಸಿ ಪಾಂಡಿತ್ಯ ಪ್ರದರ್ಶಿಸಿದ.

ಹೆಂಡ+ಅತಿ ಹೆಂಡತಿ ಯಾವ ಸಂಧಿ ಗೊತ್ತಾ?’ ಗುಡ್ಡೆ ಕೇಳಿದ.

‘ಲೋಪ ಸಂಧಿ ಇರಬೇಕು’.

‘ಯಾವ ಲೋಪ?’

‘ಹೆಂಡತಿ ಮುಂದೆ ಬಾಲ ಬಿಚ್ಚಿದ್ರೆ ಚಾಪೆ ದಿಂಬು ಲೋಪ!’ ದುಬ್ಬೀರನ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು