ಬುಧವಾರ, ಆಗಸ್ಟ್ 10, 2022
23 °C

ಚುರುಮುರಿ: ಬೆಲ್ಲದ ಸಂತೋಷ

ಸುಧೀಂದ್ರ Updated:

ಅಕ್ಷರ ಗಾತ್ರ : | |

Prajavani

‘ಸ್ವಲ್ಪ ಬೆಲ್ಲ ತಂದ್ಕೊಡ್ತೀರಾ?’ ಅನ್ನುತ್ತಾ ಮಡದಿ ರೂಮಿಗೆ ಬರೋಹೊತ್ತಿಗೆ ಲ್ಯಾಪ್‍ಟಾಪ್‍ ಮುಂದೆ ಗಲ್ಲದ ಮೇಲೆ ಕೈಹೊತ್ತು ಕೂತಿದ್ದೆ. ‘ಈ ಕೊರೊನಾ ಹೊತ್ತಲ್ಲೇ ಆಫೀಸಿನ ಲೀಡರ್‌ಶಿಪ್ ಚೇಂಜ್ ಮಾಡ್ತಾರಂತೆ. ಸಂಕಷ್ಟದಲ್ಲೂ ಬಿಸಿನೆಸ್ ತರ್ತಿರೋ ಹುಲಿರಾಜ್ ಇನ್ನೆರಡು ವರ್ಷವಾದರೂ ಟೀಮಲ್ಲಿ ಇರಬೇಕು’ ಎಂದು ನನ್ನ ಸಂಕಟ ಹಂಚ್ಕೊಂಡೆ.

‘ವರ್ಕ್ ಫ್ರಮ್ ಹೋಮ್ ಆದ್ರೂ ಶಿಸ್ತಿನಿಂದ ಆಫೀಸ್ ಕೆಲಸ ಮಾಡೋದ್ರಲ್ಲಿ ನೀವು ಯಾವ ಸೈನಿಕನಿಗೂ ಕಡಿಮೆಯಿಲ್ಲ’ ಎನ್ನುತ್ತಾ ಬೆನ್ನು ಚಪ್ಪರಿಸಿದಳು ಮಡದಿ. ಅವಳು ಆಡಿದ ಮಾತು ಬೈದಿದ್ದೋ ಹೊಗಳಿದ್ದೋ ಅನ್ನೋದು ಸುಲಭವಾಗಿ ಗೊತ್ತಾಗೋಲ್ಲ.‌

ಆಫೀಸ್ ಫೋನ್ ಬರೋಷ್ಟರಲ್ಲಿ ಬೆಲ್ಲದ ಕೆಲಸ ಮುಗಿಸೋಣವೆಂದು ಅಂಗಡಿಯತ್ತ ಹೊರಟೆ.

ಅಂಗಡಿಯ ಶೆಟ್ಟರಿಗೆ ‘ಬೇಗ ಒಂದು ಬೆಲ್ಲದ ಪ್ಯಾಕೆಟ್ ಕೊಡಿ, ಆಫೀಸ್ ಕೆಲಸದ ಮಧ್ಯೆ ಬಂದಿದೀನಿ’ ಅಂದೆ.

‘ಡೆಲ್ಲೀಲಿ ಬೆಲ್ಲದ ಡಿಮ್ಯಾಂಡ್ ಜಾಸ್ತಿ ಆಗಿರೋದ್ರಿಂದ ಸ್ಟಾಕಿಲ್ಲ, ಸಕ್ಕರೇನೇ ಕೊಡ್ತೀನಿ’ ಅಂದರು. ‘ಯಾವ್ದೋ ಒಂದು ಕೊಡಿ’ ಅಂತ ತೊಗೊಂಡು ಬಂದೆ.

ಬ್ಯಾಗು ತೆಗೆದ ಮಡದಿ ‘ಬೆಲ್ಲದ ವಿಷಯ ಮರೆತು ಸಕ್ಕರೆ ತಂದಿದೀರಲ್ಲಾ’ ಎಂದು ರಾಗವೆಳೆದಳು. ‘ಸ್ವೀಟ್ ಮಾಡೋಕ್ಕೆ ಅದೇ ಬೆಟರಲ್ವಾ?’ ಎಂದೆ. ‘ನಾನು ಬೆಲ್ಲ ಕೇಳಿದ್ದು ಸ್ವೀಟಿಗಲ್ಲ. ಡೆಲ್ಲೀಲಿರೋ ಸಂತೋಷ್ ಮಾವ ಹೇಳ್ತಿದ್ರು, ಆರೋಗ್ಯಕ್ಕೆ ಒಳ್ಳೇದೂಂತ ಬೆಲ್ಲದ ಕಾಫಿ ಅಭ್ಯಾಸ ಮಾಡಿಕೊಂಡಿದಾರಂತೆ. ನಮ್ಮನೇಲೂ ಇನ್ಮೇಲೆ ಬೆಲ್ಲದ ಕಾಫೀನೇ’ ಅಂದಳು.

‘ಸಕ್ಕರೆ ಬದಲು ಬೆಲ್ಲ ತಂದ್ಕೊಡ್ಲಾ?’ ಎಂದೆ.

‘ಎಕ್ಸ್‌ಚೇಂಜೇನೂ ಬೇಡ. ಸಂಜೆ ಅರುಣ್ ಚಿಕ್ಕಪ್ಪ ಮನೇಗೆ ಬರ್ತಿದಾರೆ. ಸಕ್ಕರೆಯಲ್ಲೇ ಕೇಸರಿಭಾತ್ ಮಾಡ್ತೀನಿ’ ಎಂದಳು ಸ್ವೀಟಾಗಿ.

ಫೋನ್ ಬಂತು. ‘ಲೀಡರ್‌ಶಿಪ್‍ನಲ್ಲಿ ಬದಲಾವಣೆಯಿಲ್ಲಾಂತ ಹೆಡ್ಡಾಫೀಸ್ ಮೇಯ್ಲ್ ಬಂದಿದೆ’ ಅಂದ ಕಲೀಗ್ ಸೋಮಣ್ಣ. ‘ನಿನ್ನ ಬಾಯಿಗೆ ಸಕ್ಕರೆ ಹಾಕಾ’ ಅಂದೆ.

‘ಯಾರಿಗೆ?’ ಎಂದಳು ಮಡದಿ.

‘ಗಲಾಟೆ ಮಾಡದವರೆಲ್ರಿಗೂ’ ಅಂದೆ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.