ಗುರುವಾರ , ಜುಲೈ 29, 2021
26 °C

ಚುರುಮುರಿ: ಧಣಿಗಾರಿಕೆ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆಯಾ? ಬಿರುಕು ಬಿಟ್ಟಿಲ್ಲದಿದ್ದರೆ ಯಾಕೆ ಬಿಟ್ಟಿಲ್ಲ ಎಂಬ ಬಗ್ಗೆ ಚರ್ಚೆ ಮಾಡಲು ರಾಜಕೀಯ ಧುರೀಣರಾದ ಬಸಪ್ಪ, ತಿಮ್ಮಪ್ಪ ನಮ್ಮೊಂದಿಗಿದ್ದಾರೆ. ಇವರು ಏನೇನು ಹೇಳ್ತಾರೆ ಕೇಳೋಣ...’ ನ್ಯೂಸ್ ಚಾನೆಲ್ ಆ್ಯಂಕರ್ ಸ್ವಾಗತಿಸಿದಳು.

‘ಡ್ಯಾಂ ಬಿರುಕು ಬಿಡಲು ಗಣಿಗಾರಿಕೆ ಕಾರಣನಾ?’ ಆ್ಯಂಕರ್ ಕೇಳಿದಳು.

‘ಗೊತ್ತಿಲ್ಲ, ಆದರೆ ಡ್ಯಾಂ ಹೆಸರಲ್ಲಿ ರಾಜಕೀಯ ಪಕ್ಷಗಳಲ್ಲಿ ಬಿರುಕು ಕಾಣಿಸಿಕೊಂಡಿದೆ’ ಎಂದರು ಬಸಪ್ಪ.

‘ನಿಮ್ಮ ಪಕ್ಷದಲ್ಲಿ ದೊಡ್ಡ ಬಿರುಕು ಇದೆಯಲ್ರೀ...’ ಅಂದರು ತಿಮ್ಮಪ್ಪ.

‘ನಿಮ್ಮ ಪಕ್ಷದ ಬಿರುಕಿಗೆ ಯಾವ ಗಣಿಗಾರಿಕೆ ಕಾರಣ?’ ಆ್ಯಂಕರ್‌ಗೆ ಕುತೂಹಲ.

‘ಗಣಿಗಾರಿಕೆ ಅಲ್ಲಾರೀ, ಧಣಿಗಾರಿಕೆ. ನಾನೇ ಸಿ.ಎಂ ಅಂತ ಕೂಸು ಹುಟ್ಟುವ ಮೊದಲೇ ಇವರ ಪಕ್ಷದವರು ಕುಲಾವಿ ಹೊಲಿಸುತ್ತಿದ್ದಾರೆ...’ ತಿಮ್ಮಪ್ಪ ನಕ್ಕರು.

‘ಆ ವಿಚಾರ ನಿಮಗ್ಯಾಕ್ರೀ, ಕುಲಾವಿ ಸೈಜಿಗೆ ಕೂಸು ಹೆರುವ ಕೆಪಾಸಿಟಿ ನಮ್ಮ ನಾಯಕರಿಗಿದೆ’ ಬಸಪ್ಪ ತಿರುಗೇಟು ಕೊಟ್ಟರು.

‘ದಿಲ್ಲಿ ಮೇಸ್ತ್ರಿ ಬಂದು ನಿಮ್ಮ ಪಕ್ಷದ ಬಿರುಕಿಗೆ ಕಾಂಕ್ರೀಟ್ ಹಾಕಿ ಹೋಗಿದ್ದಾರಲ್ರೀ...’

‘ಹೌದು ಹಾಕಿದ್ದಾರೆ, ಚುನಾವಣೆವರೆಗೂ ಬಿರುಕು ಬರೋಲ್ಲ ಅಂತ ರೆಡ್ ಇಂಕ್‍ನಲ್ಲಿ ಅಂಡರ್‌ಲೈನ್ ಮಾಡಿದ್ದಾರೆ. ನಿಮ್ಮ ಪಕ್ಷದಲ್ಲೂ ಧಣಿಗಾರಿಕೆ ಬಿರುಕು ಇದೆ, ಮೊದಲು ಅದನ್ನು ಮುಚ್ಚಿಕೊಳ್ರೀ...’

‘ಏನಿಲ್ಲ, ಸಿ.ಎಂ ದಣಿದಿದ್ದಾರೆ, ಚೇಂಜ್ ಮಾಡಿ ಹೊಸ ಧಣಿ ಕೂರಿಸಿ ಅಂತ ಸದಭಿಪ್ರಾಯ ವ್ಯಕ್ತಪಡಿಸಿದ್ದೀವಿ ಅಷ್ಟೇ...’

‘ಮೈಕ್ ಸಿಕ್ಕರೆ ಸಾಕು ನೀವು ಮೈಮೇಲೆ ಚೇಳು ಬಿಟ್ಟುಕೊಂಡವರಂತೆ ಧಣಿಗಾರಿಕೆ ವಿರುದ್ಧ ಚೀರಾಡ್ತೀರಲ್ರೀ...’ ಮಾತಿಗೆ ಮಾತು ಬೆಳೆದು ನಾಯಕರ ವಾದ-ವಿವಾದ ವಿಕೋಪಕ್ಕೋಯಿತು. ಕೂಗಾಡಿ ಕುರ್ಚಿ, ಮೈಕ್ ಎಸೆದಾಡಿದರು.

ವೀಕ್ಷಕರು ಗಾಬರಿಯಾದರು. ನಾಯಕರ ಆರ್ಭಟದಿಂದ ತಮ್ಮ ಟಿ.ವಿ. ಬಿರುಕು ಬಿಡಬಾರದು ಎಂದು ಚಾನೆಲ್ ಚೇಂಜ್ ಮಾಡಿ ಟಿ.ವಿ. ಕಾಪಾಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.