ಗುರುವಾರ , ಏಪ್ರಿಲ್ 15, 2021
27 °C

ಚುರುಮುರಿ: ಪರ್ಯಾಯ ಬೆಟ್ಟ

ಸಿ.ಎನ್‌.ರಾಜು Updated:

ಅಕ್ಷರ ಗಾತ್ರ : | |

ಚಟ್ನಿಹಳ್ಳಿ ಗ್ರಾಮಸ್ಥರೊಂದಿಗೆ ಶಾಸಕರು ಸರ್ಕಾರಿ ಸಾಹೇಬರ ಬಳಿ ನಿಯೋಗ ಬಂದಿದ್ದರು. ‘ಸಾರ್, ಚಟ್ನಿಹಳ್ಳಿಯಲ್ಲಿ ಜಿಲೆಟಿನ್ ಸೌಂಡ್ ಜಾಸ್ತಿಯಾಗಿದೆ, ಜನ ಹೆದರಿಕೊಂಡಿದ್ದಾರೆ’ ಅಂದರು ಶಾಸಕರು.

‘ಹಾಗಂತ, ಸೌಂಡ್‍ಪ್ರೂಫ್ ಜಿಲೆಟಿನ್ ಇದೆಯೇನ್ರೀ?’ ಸಾಹೇಬ್ರು ಕೇಳಿದ್ರು.

‘ಹಾಗಲ್ಲಾ ಸಾರ್, ಕಲ್ಲುಗಣಿಗಾರಿಕೆಯವರು ಊರಿನ ಬೆಟ್ಟ ಸಿಡಿಸಿ ನಾಶ ಮಾಡುತ್ತಿದ್ದಾರೆ, ಇದನ್ನು ತಡೆಯಿರಿ’ ಎಂದರು ಶಾಸಕರು.

‘ಅದರ ಗುತ್ತಿಗೆಯನ್ನು ನೀವೇ ಅಲ್ಲವೇನ್ರೀ ಪಡೆದಿರೋದು...’ ಸಾಹೇಬ್ರು ಕಣ್ಣು ಮಿಟುಕಿಸಿದರು.

‘ಮೆಲ್ಲಗೆ ಮಾತನಾಡಿ ಸಾರ್, ಊರಿನವರಿಗೆ ಗೊತ್ತಾಗೋದು ಬೇಡ’ ಪಿಸುಗುಟ್ಟಿದರು ಶಾಸಕರು.

‘ಗಣಿಗಾರಿಕೆಯವರು ಊರಿನ ಬೆಟ್ಟ ಒಡೆದು ನಾಶ ಮಾಡುತ್ತಿದ್ದಾರೆ, ಬೆಟ್ಟ ಉಳಿಸಿ’ ಗ್ರಾಮಸ್ಥರು ಕೋರಿದರು.

‘ಬೆಟ್ಟ ಕಡಿಯದಿದ್ದರೆ ಅಭಿವೃದ್ಧಿ ಕೆಲಸಕ್ಕೆ ಜಲ್ಲಿ, ಕಲ್ಲು, ಎಂ.ಸ್ಯಾಂಡ್ ಬ್ಯಾಡವೇನ್ರೀ’ ಸಾಹೇಬ್ರು ಪ್ರಶ್ನೆ ಮಾಡಿದ್ರು.

‘ಏನಾದ್ರೂ ಮಾಡಿ, ನಮ್ಮೂರಿಗೊಂದು ಬೆಟ್ಟ ಬೇಕೇಬೇಕು...’ ಗ್ರಾಮಸ್ಥರು ಹಟಕ್ಕೆ ಬಿದ್ದರು. ಸಾಹೇಬ್ರು ತಲೆ ಕೆಡಿಸಿಕೊಂಡರು, ‘ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡ ಬಹುದೂರೀ?’ ಅಧಿಕಾರಿಗಳನ್ನು ಕೇಳಿದರು.

‘ಇರುವ ಬೆಟ್ಟವನ್ನು ಒಡೆದು, ಅದೇ ಜಾಗದಲ್ಲಿ ಪ್ಲಾಸ್ಟಿಕ್ ಬೆಟ್ಟ ನಿರ್ಮಿಸಬಹುದು ಸಾರ್. ನಮ್ಮಲ್ಲಿ ಬೆಟ್ಟದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಇದೆ. ಅದನ್ನೆಲ್ಲಾ ಚಟ್ನಿಹಳ್ಳಿಯಲ್ಲಿ ಬೆಟ್ಟವಾಗಿ ನಿರ್ಮಾಣ ಮಾಡಿ, ಅಲ್ಲಿ ದೇವಸ್ಥಾನ, ಮೆಟ್ಟಿಲು, ಉದ್ಯಾನವನ ನಿರ್ಮಾಣ ಮಾಡಿದರೆ, ಪ್ಲಾಸ್ಟಿಕ್ ಬೆಟ್ಟವು ಪ್ರವಾಸಿ ತಾಣ, ಶ್ರದ್ಧಾ ಕೇಂದ್ರವಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ...’ ಎಂದರು ಅಧಿಕಾರಿ.

‘ಕಲ್ಲಿನದೋ ಪ್ಲಾಸ್ಟಿಕ್‍ದೋ ಒಂದು ಬೆಟ್ಟ ನಿರ್ಮಾಣ ಮಾಡಿ, ಅದರ ಪ್ರಾಜೆಕ್ಟ್ ರಿಪೋರ್ಟ್ ಕೊಡಿ’ ಸಾಹೇಬ್ರು ಆದೇಶ ಮಾಡಿದರು.

ಬೆಟ್ಟ ನಿರ್ಮಾಣವಾಗಿ, ನಮ್ಮೂರು ಪ್ರವಾಸಿ ತಾಣವಾಗಿ ಪ್ರಸಿದ್ಧವಾಗುತ್ತದೆ ಎಂದುಕೊಳ್ಳುತ್ತಾ ಗ್ರಾಮಸ್ಥರು ಖುಷಿಯಿಂದ ಹೊರಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.