ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣೆ ರಾಜು ಅವರ ಚುರುಮುರಿ: ಬಾಯಿಬಿಟ್ಟರೆ...!

Last Updated 26 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

‘ಬೈ ಎಲೆಕ್ಷನ್ ಅಂದ್ರೆ ರಾಜಕೀಯ ನಾಯಕರು ಬೈದಾಡುವ ಪಂದ್ಯಾವಳಿಯೇನ್ರೀ?...’ ಸುಮಿಗೆ ಸಿಟ್ಟು ಬಂದಿತ್ತು. ‘ಹಾಗೇ ಅನ್ನಿಸ್ತಿದೆ. ವೇದಿಕೆ ಮೇಲೆ ಔಟ್‍ಡೋರ್ ಗೇಮ್, ಟ್ವಿಟರ್‌ನಲ್ಲಿ ಇನ್‌ಡೋರ್ ಗೇಮ್ ಬೈದಾಟ. ಎರಡೆರಡು ಆಟ, ಡಬಲ್ ಗೇಮು...’ ಎಂದ ಶಂಕ್ರಿ.

‘ಜನನಾಯಕರಿಗೆ ಹಳದಿ ಕಣ್ಣು, ಎದುರಾಳಿ ಪಕ್ಷದಲ್ಲಿ ಅವರಿಗೆ ಕಾಣೋದೆಲ್ಲಾ ಹಳದಿ...’

‘ಇಂಥಾ ಸಂದರ್ಭದಲ್ಲಿ ಪೊಲೀಸರು ಕೇಸರಿ ಶಾಲು ಧರಿಸಿ ಕಾಂಗ್ರೆಸ್ಸಿಗರನ್ನು ಕೆರಳಿಸಿಬಿಟ್ಟರು’.

‘ಆಯುಧಪೂಜೆ ಆಚರಣೆ ವೇಳೆ ಪೊಲೀಸರು ಕಲರ್ ಡ್ರೆಸ್ ಹಾಕೋದು ತಪ್ಪಾಗುತ್ತೇನ್ರೀ?’

‘ಪೊಲೀಸರಿಗೆ ಕೇಸರಿ ಒಪ್ಪದು, ಮುಖ್ಯವಾಗಿ ಕಾಂಗ್ರೆಸ್‌ನವರು ಅದನ್ನು ಒಪ್ಪುವುದಿಲ್ಲ. ಹಬ್ಬದ ಆಚರಣೆಯಲ್ಲಿ ಪೊಲೀಸರು ವೀರ ಮದಕರಿ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮನ ವೇಷ ಹಾಕಿದ್ದರೆ ಆಕ್ಷೇಪವಿರಲಿಲ್ಲವಂತೆ, ಕೇಸರಿ ವೇಷ ಹಾಕಿದ್ದಕ್ಕೆ ಕಾಂಗ್ರೆಸ್ಸಿನವರು ವೀರ ಕೇಸರಿಗಳಾಗಿ ಗರ್ಜಿಸಿದ್ದಾರೆ’.

‘ಕಾಂಗ್ರೆಸ್‍ನವರಿಗೆ ಕಲರ್ ಬ್ಲೈಂಡ್‌ನೆಸ್‌ ಇದೆ. ಅವರಿಗೆ ಕೇಸರಿ ಬಣ್ಣ ಕಂಡರೆ ಕಣ್ಣುರಿ. ಕೇಸರಿ ತ್ಯಾಗ, ನಮ್ಮ ಸಂಸ್ಕೃತಿಯ ಸಂಕೇತ ಅಂತ ಹೋಂ ಮಿನಿಸ್ಟರ್ ಹೇಳಿದ್ದಾರೆ’.

‘ಪೊಲೀಸರದ್ದು ಖಾಕಿ ಬಣ್ಣ, ಅವರು ಬಣ್ಣ ಬದಲಾಯಿಸುವುದು ಅಪಾಯಕಾರಿ ಎಂದು ಠಾಣೆ ಎದುರು ರಾಷ್ಟ್ರಧ್ವಜ ಹಾರಿಸಿ, ಪೊಲೀಸರಿಗೆ ಖಾಕಿ ಬಟ್ಟೆ ವಿತರಿಸುವ ಕಾರ್ಯಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷರು ಮಾಡ್ತಾರಂತೆ’.

‘ಬಿಜೆಪಿಯವರು ಕೇಸರಿ ಬಣ್ಣ, ಗಾಂಧಿ ಟೋಪಿಯ ಕಾಂಗ್ರೆಸ್‍ನವರು ಬಿಳಿ, ಜೆಡಿಎಸ್‍ನವರು ಹಸಿರು ಬಣ್ಣವನ್ನು ಆರಾಧಿಸುತ್ತಾರೆ ಅಲ್ವೇನ್ರೀ?’

‘ಹೌದು, ಕೇಸರಿ, ಬಿಳಿ, ಹಸಿರಿನ ತ್ರಿವರ್ಣ ಧ್ವಜದ ಬಣ್ಣಪ್ರೇಮಿಗಳಾದರೂ ನಾಯಕರಲ್ಲಿ ವರ್ಣಭೇದವಿದೆ. ವಿರೋಧಿ ಬಣ್ಣವನ್ನು ಸಹಿಸುವುದಿಲ್ಲ. ಪ್ರತಿಸ್ಪರ್ಧಿಗಳ ಬಣ್ಣ ಬಯಲು ಮಾಡುವ ಭರದಲ್ಲಿ ಬೈದಾಡಿಕೊಂಡು ತಾವೂ ಬಣ್ಣ ಕಳೆದುಕೊಳ್ಳುತ್ತಾರೆ. ನಾಯಕರು ಬಾಯಿಬಿಟ್ಟರೆ ಬಣ್ಣಗೇಡು ಎನ್ನುವಂತಾಗಿದೆ...’ ಎಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT