ಬುಧವಾರ, ಏಪ್ರಿಲ್ 14, 2021
31 °C

ಚುರುಮುರಿ: ಬಿಗ್‍ಬಾಸ್‍ಗೆ ಹುಲಿಗಳು!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಏನ್ರಲೆ, ಈ ಸಲದ ಬಿಗ್‍ಬಾಸ್‍ಗೆ ನಮ್ಮ ತೆಪರೇಸಿನ ಕಳಿಸಿದ್ರೆ ಹೆಂಗೆ? ಕಪ್ ಗೆದ್ಕಂಡ್ ಬರ್ತಾನೆ ಅನ್ಸುತ್ತಾ?’ ಹರಟೆಕಟ್ಟೆಯಲ್ಲಿ ಗುಡ್ಡೆ ವಿಷಯ ಪ್ರಸ್ತಾಪಿಸಿದ.

‘ಅಲ್ಲಿ ಒಳಗೆ ಹೋದ ಮೇಲೆ ಕೊನೀತಂಕ ತೆಪ್ಪಗಿರಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಹೊರಗೆ ಕಳಿಸಿಬಿಡ್ತಾರಂತೆ...’ ದುಬ್ಬೀರ ಮಾಹಿತಿ ನೀಡಿದ.

‘ತೆಪ್ಪಗಿರದೆ ಏನ್ಮಾಡ್ತಾನೆ, ಮನೇಲಿ ಹೆಂಡ್ತಿ ಮುಂದೆ ಯಾವತ್ತಾದ್ರೂ ಪಿಟಿಕ್ ಅಂದಿದಾನಾ?’ ಪರ್ಮೇಶಿ ನಕ್ಕ.

‘ಅದು ಮನೇಲಿ, ಬಿಗ್‍ಬಾಸ್‍ನಲ್ಲಿ ಹೆಂಡ್ತಿ ಇರಲ್ವಲ್ಲ ಅದ್ಕೇ ಹೇಳಿದೆ’ ದುಬ್ಬೀರ ವಾದಿಸಿದ.

‘ನನ್ ವಿಷಯ ಮಾತಾಡದಿದ್ರೆ ನಿಮಗೆ ತಿಂದ ಅನ್ನ ಕರಗಲ್ಲ ಅಲ್ವ?’ ಎಂದ ತೆಪರೇಸಿ, ‘ನನ್ನ ವಿಷಯ ಬಿಡ್ರಿ, ಬಿಗ್‍ಬಾಸ್‍ಗೆ ನಮ್ಮ ಹುಲಿಗಳನ್ನ ಕಳಿಸಿದ್ರೆ ಹೆಂಗೆ?’ ಅಂದ.

‘ಹುಲಿಗಳಾ? ಯಾವುವು?’

‘ರಾಜಾಹುಲಿ, ಹೌದು ಹುಲಿಯಾ, ಉತ್ತರ ಕರ್ನಾಟಕದ ಹುಲಿ, ಹೊನ್ನಾಳಿ ಹುಲಿ, ವಿಜಯಪುರದ ಹುಲಿ ಇತ್ಯಾದಿ...’

‘ಕತಿ ಮುಗೀತು, ಬಿಗ್‍ಬಾಸ್‍ನೋರು ಏನು ಶೋ ನಡೆಸ್ತಿದಾರೋ ಸರ್ಕಸ್ ನಡೆಸ್ತಿದಾರೋ?’ ಗುಡ್ಡೆ ಆಕ್ಷೇಪಿಸಿದ.

‘ಮತ್ತೇನು ಈಗ ರಾಜ್ಯದಲ್ಲಿ ಸರ್ಕಾರ ನಡೀತೈತಿ ಅನ್ಕಂಡ್ಯಾ? ಸರ್ಕಸ್ಸೇ ನಡೀತಿರೋದು...’ ತೆಪರೇಸಿ ನಕ್ಕ.

‘ಆತು ಬಿಡಪ್ಪ, ಈಗ ಆ ಎಲ್ಲ ಹುಲಿಗಳನ್ನ ಒಟ್ಟಿಗೇ ಬಿಗ್‍ಬಾಸ್ ಮನಿಗೆ ಬಿಟ್ರೆ ಒಂದೇ ದಿನಕ್ಕೆ ಶೋ ಮುಗೀತತಿ ಅನ್ಸುತ್ತಪ್ಪ!’

‘ಯಾಕೆ?’

‘ಹುಲಿಗಳು ಸುಮ್ನಿರ್ತಾವಾ? ಕಿತ್ತಾಡಿ ಕಚ್ಚಾಡಿ ಎರಡೇ ದಿನಕ್ಕೆ ಒಂದೂ ಉಳಿದಿರಲ್ಲ ಅನ್ಸುತ್ತೆ’.

‘ಅದೇ ತಪ್ಪು, ಎಲ್ಲ ಹುಲಿಗಳೂ ಚೆನ್ನಾಗಿ, ಸುಖವಾಗಿ ಕೊನೀತಂಕ ಇರ್ತವೆ’.

‘ಹೌದಾ? ಹೆಂಗೆ?’

‘ಹೆಂಗೆ ಅಂದ್ರೆ? ಅಧಿಕಾರ ಇದ್ರೆ ಕಚ್ಚಾಡ್ತಾವೆ. ಇಲ್ಲದಿದ್ರೆ ತೆಪ್ಪಗಿರ್ತಾವೆ!’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.