ಶನಿವಾರ, ಜುಲೈ 2, 2022
22 °C

ಚುರುಮುರಿ: ಯಾರಿಗೆ ಪ್ರಶಸ್ತಿ?

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಗುಡ್‌ನ್ಯೂಸ್ ಕಣ್ರಲೆ, ಕೊನಿಗೂ ಕೊರೋನ ಮೂರನೇ ಅಲೆ ನೆಗೆದು ಬಿತ್ತಂತೆ, ನಾಕನೇ ಅಲೆ ಬರಲ್ಲಂತೆ!’ ತೆಪರೇಸಿ ಹರಟೆಕಟ್ಟೆ ಗೆಳೆಯರಿಗೆ ಬ್ರೇಕಿಂಗ್ ನ್ಯೂಸ್ ಥರ ಕೂಗಿ ಹೇಳಿದ.

‘ಹೌದಾ? ಮತ್ತೆ ಹೊಡೀರಿ ಹಲಿಗಿ! ಇವತ್ತು ಎಲ್ಲಿ ಪಾರ್ಟಿ?’ ಗುಡ್ಡೆಗೆ ಖುಷಿ.

‘ಥು ನಿನ್ನ, ಏನ್ ಸುಡುಗಾಡಂದ್ರೂ ಅದಕ್ಕೊಂದು ಪಾರ್ಟಿ ಕೇಳ್ತಿಯಲ್ಲಲೆ, ಟೀವೀಲಿ ಕೊರೋನ ನೆಗೆದುಬಿದ್ದು ತಿಂಗಳ ಮ್ಯಾಲಾತು. ಹಿಜಾಬು, ಈಶ್ವರಪ್ಪ- ಸಿದ್ರಾಮಣ್ಣರ ಗದ್ಲ, ಕಾಂಗ್ರೆಸ್ ಪಾದಯಾತ್ರೆ, ಅಧಿವೇಶನ... ಇವೆಲ್ಲ ಸೇರಿ ಕೊರೋನನ ಟೀವಿಗಳಿಂದ ಯಾವತ್ತೋ ಕಿಕ್‌ಔಟ್ ಮಾಡಿದ್ವು...’ ದುಬ್ಬೀರ, ಗುಡ್ಡೆ ಮೂತಿಗೆ ತಿವಿದ.

‘ನೋಡು, ಕಿಕ್ಕು, ಔಟು ಅಂತ ನೀನೇ ನೆನಪಿಸ್ತಿದೀಯ... ಇವತ್ತು ನಿಂದೇ ಎಲ್ಲ...’ ಗುಡ್ಡೆ ಟೋಪಿ ರೆಡಿ ಮಾಡಿಕೊಂಡ.

‘ಸದಾಶಿವುಂಗೆ ಅದೇ ಧ್ಯಾನಂತೆ. ನೀನು ಉದ್ಧಾರ ಆಗಲ್ಲ...’ ದುಬ್ಬೀರ ನಕ್ಕ.

‘ಈಗ ಟೀವಿಗಳಿಂದ ಕೊರೋನ ಕಿಕ್‌ಔಟ್ ಮಾಡಿದ ಪ್ರಶಸ್ತಿ ಯಾರಿಗೆ ಕೊಡೋಣ? ನಂಗೇನೋ ಈಶ್ವರಪ್ಪ- ಸಿದ್ರಾಮಣ್ಣಂಗೆ ಜಂಟಿಯಾಗಿ ಕೊಡಬೋದು ಅನ್ಸುತ್ತಪ್ಪ’ ತೆಪರೇಸಿ ತನ್ನ ಅಭಿಪ್ರಾಯ ಮಂಡಿಸಿದ.

‘ನೋ ಚಾನ್ಸ್, ಕಾಂಗ್ರೆಸ್ ಪಾದಯಾತ್ರೆಗೆ ಆ ಪ್ರಶಸ್ತಿ ಸಿಗಬೇಕು’ ಕೊಟ್ರೇಶಿ ವಾದಿಸಿದ.

‘ಯಾಕೆ? ಪಂಚರಾಜ್ಯ ಚುನಾವಣೆ ಗದ್ಲ ಏನ್ ಕಮ್ಮಿನಾ?’ ದುಬ್ಬೀರ ತಾನೂ ಒಂದು ಸೇರಿಸಿದ.

‘ಅದೆಲ್ಲ ಏನಿಲ್ಲ, ನನ್ ಪ್ರಕಾರ ಉಕ್ರೇನ್ ವಿಸ್ಕಿಗೆ ಆ ಪ್ರಶಸ್ತಿ ಕೊಡ್ಬೇಕು...’ ಎಂದ ಗುಡ್ಡೆ.

‘ಏನು? ವಿಸ್ಕಿನಾ?’ ತೆಪರೇಸಿಗೆ ಅರ್ಥವಾಗಲಿಲ್ಲ.

‘ಹೂನಲೆ, ಅದೇ ಉಕ್ರೇನ್ ಅಧ್ಯಕ್ಷ ಅದಾನಲ್ಲ ಅದೆಂಥದೋ ವಿಸ್ಕಿ ಅಂತ. ಟೀವಿ ತುಂಬಾ ಅವುಂದೇ ಯುದ್ಧ. ಅವನಿಗೇ ಪ್ರಶಸ್ತಿ ಕೊಡ್ಬೇಕು’ ಎಂದ ಗುಡ್ಡೆ.

‘ಲೇಯ್, ಅವನು ವಿಸ್ಕಿ ಅಲ್ಲಲೆ, ‘ಸ್ಕಿ’ ಅಂತ, ಝೆಲೆನ್‌ಸ್ಕಿ’ ತೆಪರೇಸಿ ತಿದ್ದಿದ.

‘ಹೌದಾ? ನಂಗೇನೋ ಅದು ವಿಸ್ಕಿ ಅಂತಾನೇ ಕೇಳ್ಸುತ್ತಪ್ಪ’ ಗುಡ್ಡೆ ಮಾತಿಗೆ ಹರಟೆಕಟ್ಟೆಯಲ್ಲಿ ನಗೆಯ ಅಲೆ ತೇಲಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.