ಸೋಮವಾರ, ಮೇ 25, 2020
27 °C

ಚುರುಮುರಿ| ಖಾಲಿ ಬಸ್, ಕಿಟಕಿ ಸೀಟ್

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

‘ರೀ, ನಿಮ್ಮ ಫ್ರೆಂಡ್ ಕಂಠಿ ಕಾಣ್ತಿಲ್ವಂತೆ... ಶ್ರೀಮತಿ ಫೋನ್ ಮಾಡಿದ್ಳು, ನಿಮಗೇನಾದರೂ ಗೊತ್ತಾ ಅಂತ ತಿಳ್ಕೊಳ್ಳೋಕೆ?’ ನನ್ನವಳು ಕಾತರದಿಂದ ಕೇಳಿದಳು.

‘ಹೇಳದೇ ಎಲ್ಲಿ ಹೊರಟುಹೋಗ್ತಾರೋ ಈ ಹಾಳು ಗಂಡಸರು, ಮನೆಯವರಿಗೆ ದಿಗಿಲಾಗೋಲ್ವೆ?’ ಅತ್ತೆಯ ಒಗ್ಗರಣೆ.

‘ಪೊದೆಕೂದಲು, ಗೀಚದ ಗಡ್ಡ, ಮುಖಗವಸುಧಾರಿ... ಬೆಳಿಗ್ಗೆ ವಾಕಿಂಗ್‌ಗೆ ಹೋದಾಗ ನೋಡಿದಹಾಗಿತ್ತು. ಸಾಮಾಜಿಕ ಅಂತರ ಇದ್ದದ್ದರಿಂದ ಕ್ಲ್ಯಾರಿಟಿ ಇಲ್ಲ, ಅವನೇ ಅಂತ ಹೇಳೋಕ್ಕಾಗೋಲ್ಲ. ಫೋನ್ ಮಾಡಿದ್ರೆ ತಿಳೀತಿತ್ತು’ ನಾನು ಉತ್ತರಿಸಿ ಸುಮ್ಮನಾದೆ.

‘ಆ ಪುಣ್ಯಾತ್ಮ ಫೋನ್ ಮನೇಲೆ ಬಿಟ್ಟು ಹೋಗಿದ್ದಾರಂತೆ’ ಮತ್ತೆ ಮೂತಿಗೆ ತಿವಿದಳು.

‘ಬರ್ತಾನೆ, ಎಲ್ಲಿ ಹೋಗ್ತಾನೆ ಬಿಡು. ಏಳರ ಒಳಗೆ ಮನೆ ಸೇರಲೇಬೇಕಲ್ಲ. ಇನ್ನೂ ಐದೂವರೆ, ನಾನೂ ಒಂದು ಗಳಿಗೆ ವಾಕ್‌ಗೆ ಹೊರಟೆ’ ಎಂದು ಅಣಿಯಾಗುವಷ್ಟರಲ್ಲಿ ಕಂಠಿಯೇ ಪ್ರತ್ಯಕ್ಷ!

‘ಇಷ್ಟು ಹೊತ್ತು ನಿನ್ನದೇ ಪುರಾಣ, ಬಾ, ನೀನು ಬೆಳಗಿನಿಂದ ಮಾಯ ಅನ್ನೋ ಸುದ್ದಿ ಇಲ್ಲಿವರೆಗೂ ಬಂದಿದೆ’ ಎಂದೆ.

‘ಮೊದಲು ಈ ಬಜ್ಜಿ, ಬೋಂಡಾ ತಗೊಳ್ಳಿ’ ಅಂತ ಒಂದು ಪೊಟ್ಟಣ ನನ್ನತ್ತ ಚಾಚಿದ.
‘ಅದೇನಾಯ್ತು ಅಂದ್ರೆ, ಬೆಳಿಗ್ಗೆ ವಾಕಿಂಗ್ ಹೋದೆನಾ? ಪಾರ್ಕಿನ ಗೇಟಿನಾಚೆ ಒಳ್ಳೆಯ ಟೀ. ಅದನ್ನು ಹೀರುವಷ್ಟರಲ್ಲೇ ಬಿಎಂಟಿಸಿ ಬಸ್ ಬಂತು. 70 ರೂಪಾಯಿಯ ಪಾಸ್ ಕೊಂಡ ಕರ್ಮಕ್ಕೆ ಇಡೀ ದಿನ ಓಡಾಡುವ ಅಂತ ಮಾಡಿದೆ, ಕೊಟ್ಟ ಹಣದ ಸಂಪೂರ್ಣ ಪ್ರಯೋಜನ. ಖಾಲಿ ಬಸ್, ಕಿಟಕಿ ಸೀಟ್, ಅದರ ಮಜವೇ ಬೇರೆ. ಅಲ್ಲಲ್ಲಿ ಇಳಿದೆ. ರಸ್ತೆಬದಿಯಲ್ಲೇ ತಿಂಡಿಗೆ ಇಡ್ಲಿಚಟ್ನಿ, ಊಟಕ್ಕೆ ಚಿತ್ರಾನ್ನ, ಮಸಾಲೆ ವಡೆ, ಸಂಜೆಗೆ ಬೋಂಡ ಬಜ್ಜಿ ತಿಂದು ಮನೆಗೂ ಕಟ್ಟಿಸಿಕೊಂಡೆ. ದಾರೀಲಿ ನಿನಗೂ ನಾಲ್ಕು ಕೊಟ್ ಹೋಗೋಣಾಂತ ಬಂದೆ’ ಹಲ್ಕಿರಿದ.

‘ಬೋಂಡಾ ಚೆನ್ನಾಗಿದೆ, ಸ್ಪೈಸಿ’ ಪುಟ್ಟಿಯ ಪ್ರಶಂಸೆ. ‘ಕಾಫಿ ಕುಡ್ಕೊಂಡು ಹೋಗಿ ಪರವಾಗಿಲ್ಲ, ಏಳರ ಒಳಗೆ ಮನೆ ಸೇರ್ಕೋಬಹುದು’ ನನ್ನವಳು ಹೊಗೆಯಾಡುವ ಕಾಫಿ ತಂದಿತ್ತಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.