ಸೋಮವಾರ, ಜೂನ್ 21, 2021
29 °C

ಚುರುಮುರಿ: ಕಾರ್ ಯೋಗ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ಹೊಸ ಕಾರು ಖರೀದಿಸಿದ್ದ ಪಕ್ಕದ ಮನೆ ಪದ್ಮಾ ಬಂದು ಸುಮಿಗೆ ಸ್ವೀಟ್ ಕೊಟ್ಟು, ಸಡಗರ ಹಂಚಿಕೊಂಡಳು. ‘ಈ ಬೀದಿಯಲ್ಲಿ ಕಾರು ಇಲ್ಲದಿರುವವರು ನೀವೊಬ್ಬರೇ, ನೀವೂ ಕಾರು ತೊಗೊಳಿ...’ ಅಂದಳು.

‘ನಮಗೆ ಕಾರಿನ ಯೋಗ ಇಲ್ಲ ಆಂಟಿ. ಒಂದು ಕಾರಿನ ಖರ್ಚಿನಲ್ಲಿ ಎರಡು ಸಂಸಾರ ಸಾಕಬಹುದು, ಕಾರಿನ ಸಹವಾಸ ಬೇಡ ಅಂತ ಗಂಡ ಹೇಳಿಬಿಟ್ಟಿದ್ದಾರೆ’.

‘ಗಂಡಂದಿರಿಗೆ ತಿಳಿವಳಿಕೆ ಕಮ್ಮಿ, ಕಾರು ಇದ್ದರೆ ಸಂಸಾರದ ಘನತೆ, ಗೌರವ ಹೆಚ್ಚುತ್ತದೆ’.

‘ಗಂಡನ ಸಂಬಳ ಎಣಿಸಿದ ಕಜ್ಜಾಯ, ತಿಂಗಳ ಕೊನೆಗೆ ಪರದಾಟ, ಕಾರುಬಾರು ಕಷ್ಟ ಆಂಟಿ’.

‘ನಾವು ಒಡವೆ ಮಾರಿ ಕಾರು ತಂದಿದ್ದೇವೆ. ಮದ್ವೆ, ಗೃಹಪ್ರವೇಶ ಯಾವುದೂ ಇಲ್ಲ, ನೀನು ಒಡವೆ ಹಾಕ್ಕೊಂಡು ಎಲ್ಲಿಗೆ ಹೋಗಬೇಕು?’

‘ಕೊರೊನಾ ಕಾಟದಲ್ಲಿ ಬಸ್ಸು, ಆಟೊದಲ್ಲಿ ಓಡಾಡಿದ್ರೆ ಯಾರಿಂದ ಯಾವ ಸೋಂಕು ಹರಡುತ್ತದೋ... ಒಂದು ಸೆಕೆಂಡ್ ಹ್ಯಾಂಡ್ ಕಾರಾದ್ರೂ ಬೇಕು ಅನಿಸಿದೆ. ಒಡವೆಗಿಂಥ ಆರೋಗ್ಯವೇ ಮುಖ್ಯ ಅಲ್ವಾ?’

‘ಹೌದು, ಸೊಸೆಯನ್ನು ಸೆಲೆಕ್ಟ್ ಮಾಡುವುದಕ್ಕಿಂತ ಹೆಚ್ಚು ಎಚ್ಚರಿಕೆಯಿಂದ ಕಾರು ಸೆಲೆಕ್ಟ್ ಮಾಡಬೇಕು. ಸೊಸೆ ಬೇರೆ ಮನೆ ಮಾಡಿಕೊಂಡು ಹೋಗಬಹುದು, ಕೊನೆವರೆಗೂ ಜೊತೆಗೆ ಬಾಳುವಂತಹ ಒಳ್ಳೆ ಕಂಪನಿಯ, ಕಷ್ಟ-ಸುಖ ಅರ್ಥ ಮಾಡಿಕೊಂಡು ಬಾಳುವ ಕಾರನ್ನು ಆಯ್ಕೆ ಮಾಡಬೇಕು’.

‘ಅಂಥಾ ಗುಣವಂತ ಕಾರು ಸಿಗುತ್ತಾ ಆಂಟಿ?’

‘ಹುಡುಕಿದ್ರೆ ಸಿಗುತ್ತೆ...’ ಸುಮಿ ತಲೆಗೆ ಹುಳುಬಿಟ್ಟು ಹೋದಳು ಪದ್ಮಾ.

‘ನಿಮ್ಮ ಹಳೆ ಒಡವೆಗಳನ್ನು ಹೊಸ ಬೆಲೆಗೆ ನಮಗೆ ಮಾರಿಬಿಡಿ, ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಿ...’ ಟಿ.ವಿ ಜಾಹೀರಾತು ನೋಡಿ ಸುಮಿಯ ಕಾರಿನ ಕನಸು ಕುಪ್ಪಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.