ಮಂಗಳವಾರ, ಫೆಬ್ರವರಿ 7, 2023
26 °C

ಚುರುಮುರಿ: ಸುಮ್ಮನಿದ್ರೆ ಸಾಕು!

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಎಲ್ಲ ಪಕ್ಷಗಳ ರಾಜಕಾರಣಿಗಳೂ ರಹಸ್ಯವಾಗಿ ಒಂದೆಡೆ ಸೇರಿದ್ದರು. ‘ಜನ ಅದು ಮಾಡಿಲ್ಲ, ಇದು ಮಾಡಿಲ್ಲ ಅಂತ ನಮ್ಮನ್ನ ತಾರಾಮಾರ ಉಗೀತಿರತರೆ. ಒಂದಷ್ಟು ದಿನ ರಾಜಕೀಯ ಮಾಡದೇ ಸುಮ್ಮಗಿರುಮಾ. ಆಮೇಲೆ ನಾವಿಲ್ದೆ ದೇಶದ ಸ್ಥಿತಿ ಏನಾಯ್ತದೆ ಅಂತ ಗೊತ್ತಾಗಲಿ!’ ಅಂತ ಒಬ್ಬ ನಾಯಕರು ವಿಚಾರ ಮಂಡಿಸಿದರು. ಎಲ್ಲರಿಗೂ ಇದು ಸರಿ ಅನ್ನಿಸಿತು.

‘ನಾಳಿಂದ ರಾಜಕಾರಣ ಬಂದ್’ ಅಂತ ತೀರ್ಮಾನ ತಗಂಡರು. ಪಕ್ಷಗಳ ಕಚೇರಿಗೆ ಬೀಗ ಬಿತ್ತು.

ಅರಾಜಕತೆ ತೊಲಗಿ ಸರ್ಕಾರದ ಸವಲತ್ತುಗಳು ಪೂರ್ತಿಯಾಗಿ ಜನರಿಗೆ ಸೇರತೊಡಗಿದವು. ನಲವತ್ತು ಪರ್ಸೆಂಟ್ ಉಳಿದಿದ್ದರಿಂದ ಗುತ್ತಿಗೆದಾರರು ನ್ಯಾಯವಾಗಿ ಕೆಲಸ ಮಾಡತೊಡಗಿದರು. ತ್ಯಾಗಜೀವಿಗಳಿಲ್ಲದೇ
ರೆಸಾರ್ಟುಗಳು ಬಿಕೋ ಎನ್ನತೊಡಗಿದವು. ಪುಢಾರಿಗಳು ಮೈಬಗ್ಗಿಸಿ ದುಡಿಯುವ ಕೆಲಸಕ್ಕೆ ಒಗ್ಗಿಕೊಂಡರು. ಪಾದಯಾತ್ರೆಗಳು ಇಲ್ಲದ ಕಾರಣ ಟ್ರಾಫಿಕ್ ಕಿರಿಕಿರಿ ತಪ್ಪಿ ಜನ ನಿರಾಳರಾದರು.

ರೈತರ ಬೆಳೆಗೆ ಒಳ್ಳೆ ಬೆಲೆ ಸಿಗತೊಡಗಿದ್ದರಿಂದ ಬೇಸಾಯಕ್ಕೆ ಕಾರ್ಪೊರೇಟ್ ಲುಕ್ ಬಂದಿತು. ಡಾಲರ್ ಬೆಲೆ ಇಳಿದು ಜನರ ಕೈಯಲ್ಲಿ ಹಣ ಹೆಚ್ಚಿತು. ಬ್ಯಾಂಕುಗಳು ಒಳ್ಳೆ ಬಡ್ಡಿ ದರ ಕೊಡ
ಲಾರಂಭಿಸಿದವು. ಕೋಟಿ ಸಾಲ ಪಡೆದು ಬ್ಯಾಂಕಿಗೆ ನಾಮತೇಯುತ್ತಿದ್ದ ಸಾಲವಾದಿಗಳು ನಿರಾಶ
ರಾದರು. ರಾಜಕಾರಣಿಗಳ ಬೆಂಬಲವಿಲ್ಲದೇ ಅಧಿಕಾರಿಗಳು ಭ್ರಷ್ಟಾಚಾರವನ್ನು ತೊರೆದರು. ಲ್ಯಾಂಡು
ರೋಗಿಗಳು ವಿತ್ತಭ್ರಮೆಗೊಳಗಾದರು. ಉಗಿಯುವುದು ತಪ್ಪಿದ್ದರಿಂದ ಕೋರ್ಟುಗಳು ನಿರಾಳ
ವಾದವು. ಉಡಾಳರ ಕೈಯ್ಯಲ್ಲಿ ಕಾಸು ಇಲ್ಲದೇ ಡ್ರಗ್ಸ್ ಪೆಡ್ಲರುಗಳು ನಿರುದ್ಯೋಗಿಗಳಾದರು.

ಜನರಿಗೆ ಆರ್ಥಿಕ ನೆಮ್ಮದಿ ಸಿಕ್ಕಿದ ಕಾರಣ ಜಿಡಿಪಿ ಮತ್ತು ತಲಾದಾಯ ಏರಿತ್ತು. ರಾಜಕಾರಣಿಗಳು ಅಧಿಕಾರವಿಲ್ಲದೇ, ಖರ್ಚಿಗೆ ಕಾಸಿಲ್ಲದೇ ಬೇಸತ್ತು ಸಭೆ ನಡೆಸಿ, ರಾಜಕೀಯದಲ್ಲಿ ತೊಡಗುವುದೇ ತಮ್ಮ ಆರೋಗ್ಯಕ್ಕೆ ಮದ್ದು ಎಂದು ತೀರ್ಮಾನಿಸಿದರು.

ರಾಜಕೀಯದ ಕತ್ತೆ ವರಸೆಯು ಲಂಚ, ಪರ್ಸೆಂಟೇಜು, ಭ್ರಷ್ಟಾಚಾರ, ಬೈದಾಟಗಳ ರೂಪದಲ್ಲಿ ಮತ್ತೆ ವಾಪಸಾಗಿದ್ದರಿಂದ ಬೇಸತ್ತ ಜನ ‘ನೀವು ಸುಮ್ಮನಿದ್ದಾಗ್ಲೇ ಚೆನ್ನಾಗಿತ್ತು’ ಅಂದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.