‘ಸೋರುತಿಹುದು ಸಂಸತ್ ಮಾಳಿಗಿ… ಜಡಿಮಳೆಯಿಂದ’ ಬೆಕ್ಕಣ್ಣ ಹೊಸ ಸಂಸತ್ತಿನ ಪಡಸಾಲೆಯಲ್ಲಿ ಮಳೆನೀರಿಗೆ ಇಟ್ಟ ಬಕೆಟ್ಟುಗಳ ಚಿತ್ರ ನೋಡುತ್ತ ಹಾಡುತ್ತಿತ್ತು.
‘ಯಾಕಲೇ… ಅಜ್ಞಾನದಿಂದ ಅಲ್ಲೇನು?’ ಎಂದೆ.
‘ಖಂಡಿತಾ ಅಲ್ಲ. ವಯನಾಡಿನಾಗೆ, ಮತ್ತೆ ನಮ್ಮಲ್ಲಿ ಭೂಕುಸಿತ ಆದ್ರೆ ಅದು ರಾಜ್ಯ ಸರ್ಕಾರಗಳ ಅಜ್ಞಾನದಿಂದ, ಜನರ ಅಜ್ಞಾನದಿಂದ. ಸಂಸತ್ ಹೊಸದಾಗಿ ಕಟ್ಯಾರೆ, ಹಂಗಾಗಿ ಮೊದಲ ಜಡಿಮಳೆ ಬಂದ್ರೆ ಸೋರೂದು ಸಹಜ, ಅಜ್ಞಾನದಿಂದ ಅಲ್ಲ’ ಬೆಕ್ಕಣ್ಣ ಗುರುಗುಟ್ಟಿತು.
‘ಬ್ರಿಟಿಷರು ಕಟ್ಟಿಸಿದ ಹಳೇ ಸಂಸತ್ ಭವನ ನೂರು ವರ್ಷ ಆದ್ರೂ ಸೋರತಿದ್ದಲ್ಲಂತ… ಈಗ ಇಷ್ಟ್ ಅತ್ಯಾಧುನಿಕ ಮೇಡ್ ಇನ್ ಇಂಡಿಯಾ ತಂತ್ರಜ್ಞಾನ ಬಳಸಿ ಮಾಡಿದ್ರೂನು ಒಂದೇ ಮಳೆಗೆ ಸೋರಿದ್ರೆ ಹೆಂಗೆ?’ ನನ್ನ ಪ್ರಶ್ನೆ.
‘ಬ್ರಿಟಿಷರು ಕಟ್ಟಿಸಿದ್ದು ಅಂದ್ರೇನು ಅರ್ಥ? ಇಟ್ಟಿಗೆ, ಕಲ್ಲು, ಮಣ್ಣು ಹೊತ್ತು, ಭವನ ಕಟ್ಟಿದವರು ನಮ್ಮ ಕೂಲಿಕಾರ ಮಂದೀನೇ ಅಲ್ಲೇನು?’ ಬೆಕ್ಕಣ್ಣನ ತರ್ಕ.
‘ಅದಂತೂ ಖರೇ’ ಎಂದು ಉಪಾಯದಿಂದ ಮಾತು ಬದಲಿಸಿದೆ.
‘ಅಮೆರಿಕದ ತಲಾದಾಯ ಎಷ್ಟ್ ಹೆಚ್ಚಿಗೆ ಐತಿ ಗೊತೈತೇನ್. ಭಾರತದ ಮಂದಿ ಅವ್ರ ಕಾಲುಭಾಗದಷ್ಟು ತಲಾದಾಯ ಗಳಿಸೋದಕ್ಕೂ ಇನ್ನಾ 25 ವರ್ಷಗಳೇ ಬೇಕಾಗಬೌದು ಅಂತ ವಿಶ್ವಬ್ಯಾಂಕ್ ಹೇಳೈತಿ. ಈಗ ನಮ್ಮದು ವರ್ಷಕ್ಕೆ ಎರಡೂ ಕಾಲು ಲಕ್ಷ ರೂಪಾಯಿ ತಲಾದಾಯ ಇದ್ದರೆ ಅವರದ್ದು 59 ಲಕ್ಷ ರೂಪಾಯಿ ಐತಿ. ಅಮೃತಕಾಲ 2047ನೇ ಇಸ್ವಿಗೂ ಅವರ ಹತ್ತನೇ ಒಂದು ಭಾಗ ತಲಾದಾಯ ಗಳಿಸಕ್ಕೂ ಆಗಲ್ಲ’ ಎಂದೆ.
‘ವಿಶ್ವಬ್ಯಾಂಕ್ ಹೇಳಿದ್ದನ್ನೆಲ್ಲ ನಂಬೂದು ಹೆಂಗೆ? ಅಚ್ಛೇ ದಿನ ಬಂದಿದ್ದು ಸಾಲದೇನು? ನಮ್ ದೇಶದ ಎಲ್ಲರ ತಲಾದಾಯ ತಗಂಡು ಏನು ಮಾಡತಿ? ಅ-ಅಂ ಸ್ವರಗಳ, ಅಂದ್ರ ಅದಾನಿ, ಅಂಬಾನಿ ಇಬ್ಬರ ತಲಾದಾಯ
ಬಿಲಿಯನ್‌ಗಟ್ಟಲೆ ಐತಲ್ಲ, ಸಾಕೇಳು. ವ್ಯಂಜನಗಳ, ಅಂದ್ರೆ ನೀವು ಶ್ರೀಸಾಮಾನ್ಯರ ತಲಾದಾಯ ಲೆಕ್ಕಕ್ಕಿಲ್ಲ’ ಬೆಕ್ಕಣ್ಣ ಉಡಾಫೆಯಿಂದ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.