‘ಊರೆಲ್ಲಾ ನನ್ನ ಹುಡಿಕ್ಕ್ಯಂದು ಬತ್ತಿದ್ದನಲ್ಲ ಇವನು ಎತ್ತಗೋದ?’ ಅಂತ ಬೇತಾಳವೇ ಆತಂಕದಲ್ಲಿ ಹುಡುಕುವಾಗ, ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ವಿಕ್ರಮನು ಕುಂತುದ್ದು ಕಂಡಿತು.
‘ಅಲ್ಲಪ್ಪೋ ಯಾಕಿಂಗೆ ಡೆಂಗಿ ಬಂದೋನಂಗೆ ಕುಂತುದ್ದೀ? ನಿಮ್ಮ ಕುಟುಂಬಕ್ಕೂ ಯಾರನ್ನ ವಿಷ ಇಕ್ಕ್ಯವರಾ? ಬಿರ‍್ರನೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟುಬುಡು. ನಾನು ಪಾದಯಾತ್ರೆಗೆ ಹೋಗಬಕು’ ಅಂತ ಬೇತಾಳವೇ ವಿಕ್ರಮನ ಹೆಗಲೇರಿ ಅಡವಾಗಿ ಕುತುಗತ್ತು. ವಿಕ್ರಮನು ವಿರೋಧ ಪಕ್ಷದ ನಾಯಕರ ಥರ ಹಳ್ಳೆಣ್ಣೆ ಕುಡಿದೋನಂಗೆ ಎದ್ದು ಬೇತಾಳವನ್ನು ಹೊತ್ತು ಹೊಂಟನು. ಈತನ ಮೌನವನ್ನು ಮುರಿಯಲೇಬೇಕು ಅಂದುಕೊಂಡ ಬೇತಾಳ ಚಿತಾವಣೆ ಸುರು ಮಾಡಿತು.
‘ಅಲ್ಲಾ ಕಯ್ಯಾ, ಸಿಎಂಗೆ ನೋಟೀಸು ಕೊಟ್ಟಿರದು ಯಾಕೆ? ನಿಗಮ-ಮಂಡಳಿಗಳು ಕಾಸು ಕೆರೆಯೋ ಕೇಂದ್ರಗಳಾಯ್ತಿರದು ಯಾಕೆ? ಐಎಎಸ್ ಕೋಚಿಂಗ್ ಮಾಫಿಯಾ ಚೋಕಿಂಗ್ ಮಾಫಿಯಾ ಆಗ್ತಿರದು ಯಾಕೆ? ಕುತ್ತಿಗೆ ಕೊಯ್ಯೋ ಲೆಕ್ಕದೇಲಿ ‘ನೀನೆಷ್ಟು ಮಾಡಿದ್ದೀಯ ನಂಗೊತ್ತುಲ್ಲವೇ?’ ಅನ್ನದೇ ಮುಖ್ಯವಾಗಿ, ಜನದ ಹಿತ ಮರೀತಿರೋದು ಯಾಕೆ? ಪಾದಯಾತ್ರೇಲಿ ಜನ ತೊಂದರೆ ಅನುಭವಿಸಬೇಕು ಯಾಕೆ? ಇದೆಲ್ಲದಕ್ಕೂ ಉತ್ತರ ಗೊತ್ತಿದ್ರೂ ಬಾಯಿ ಬುಡದೇ ಹೋದರೆ ನಿನ್ನ ತಲಕಾಯಿಯು ಶಾಸಕರ ಮಕ್ಕಳು- ಮರಿಗಳ ಕೈಗೆ ಸಿಕ್ಕಿದ ಪೋಲೀಸು ಅಧಿಕಾರಿಗಳ ಜೀವದ ಥರ ಒಡೆದು ಹೋಳಾಗುವುದು’ ಎಂದು ಕೆಟ್ಟಹಾಸ ಮಾಡಿತು.
‘ಎಲೈ ಕೂಗುಭಂಡ ಬೇತಾಳವೇ, ನೀನು ಕೇಳಿದ ಪ್ರಶ್ನೆಗಳಿಗೆಲ್ಲಾ ಒಂದೇ ಉತ್ತರ. ವ್ಯವಸ್ಥೆಯಲ್ಲಿ ನೀಯತ್ತು ನಾಶವಾಗಿ ಭ್ರಷ್ಟಾಚಾರ ಬೀದಿಗೆ ಬಂದಿದೆ. ಜನರ ಮನಃಸ್ಥಿತಿ ಹದಗೆಟ್ಟು ಹೋಗ್ಯದೆ’ ಅಂದೊಡನೇ ಬೇತಾಳವು ವಿಕ್ರಮನ ಬೆನ್ನ ಮೇಲಿಂದ ಹಾರಿ ‘ನಿನ್ನ ಮೌನ ಮುರಿಯಿತು. ಮೂರೂ ಪಕ್ಷಗಳ ನಾಯಕರು ಜನವ ಮರುಳು ಮಾಡಕ್ಕೆ ಗಾರುಡಿವೇಷ ಹಾಕ್ಕ್ಯಂದು ಬೀದೀಲಿ ನಿಂತವ್ರೆ. ಇವರೆಲ್ಲರ ಮ್ಯಾಲೂ ಅಮರಿಕ್ಯಂದು ಎಲ್ಲಾರ ಅಕ್ರಮದ ಬಾಕಿಪಟ್ಟಿ ಹಿಡಕಬತ್ತಿನಿ, ನೋಡೀವೆ ಇರು. ಸೀಯೂ ರಾಜ’ ಅಂದು ಕಾಲಾಡಿಕ್ಯಂದು ಹೊಂಟೋಯ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.